ಅನಿತಾ ಪಿ. ತಾಕೊಡೆ ಅವರ ಕವನ ಸಂಕಲನದ ಹಸ್ತಪ್ರತಿಗೆ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ

0
101

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯ, ಸಾಂಸ್ಕೃತಿಕ ಕಲಾ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ (ರಿ) ಕೊಪ್ಪಳ ವತಿಯಿಂದ ಪ್ರತಿವರ್ಷವೂ ಕಾವ್ಯದ ಹಸ್ತಪ್ರತಿಗಳನ್ನು ರಾಜ್ಯಮಟ್ಟದಲ್ಲಿ ಆಹ್ವಾನಿಸಿ, ಆಯ್ಕೆಯಾದ ಎರಡು ಕಾವ್ಯದ ಹಸ್ತಪ್ರತಿಗಳಿಗೆ ‘ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ’ಯನ್ನು ಪ್ರದಾನ ಮಾಡುತ್ತ ಬಂದಿದೆ. 2025 ನೆಯ ವರ್ಷದ ‘ಗವಿಸಿದ್ಧ ಎನ್. ಬಳ್ಳಾರಿ – ಕಾವ್ಯ ಪ್ರಶಸ್ತಿ’ಯು ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನದ ಹಸ್ತಪ್ರತಿಗೆ ಲಭಿಸಿದೆ. ಈ ಪ್ರಶಸ್ತಿಯು 6,000 ರೂ. ನಗದು ಮತ್ತು ಫಲಕಗಳನ್ನು ಒಳಗೊಂಡಿರುತ್ತದೆ. ನವಂಬ‌ರ್ ತಿಂಗಳಲ್ಲಿ ಕೊಪ್ಪಳದಲ್ಲಿ ನಡೆಯುವ ‘ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವ’ದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಚಾಲರಾದ ಮಹೇಶ್ ಬಳ್ಳಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕವಿಯಾಗಿ, ಕಥೆಗಾರರಾಗಿ, ಅಂಕಣಕಾರರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವ ಅನಿತಾ ಅವರು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನು ಪ್ರಥಮ ರ್ಯಾಂಕ್‍ನೊಂದಿಗೆ ಪಡೆಯುವುದರ ಮೂಲಕ ಎಂ.ಬಿ.ಕುಕ್ಯಾನ್ ಬಂಗಾರದ ಪದಕದ ಅರ್ಹತೆಯನ್ನು ಸಾಧಿಸಿದ್ದಾರೆ. ಇವರು 2019ರಲ್ಲಿ ಮೈಸೂರು ಅರಮನೆಯ ವಿಶ್ವವಿಖ್ಯಾತ ದಸರಾ ಕವಿಗೋಷ್ಠಿಯಲ್ಲೂ ಭಾಗವಹಿಸಿ ಗೌರವ ಪುರಸ್ಕಾರವನ್ನು ಪಡೆದಿದ್ದಾರೆ.
ಇವರ ಎಂಟು ಕೃತಿಗಳು ಲೋಕಾರ್ಪಣೆಗೊಂಡಿವೆ. ಪಿಎಚ್.ಡಿ ಕೋರ್ಸ್ ವರ್ಕ್ ನ ಸಲುವಾಗಿ ಜಯ ಸಿ. ಸುವರ್ಣರ ಕುರಿತು ಸಿದ್ಧಪಡಿಸಿದ ‘ಸುವರ್ಣಯುಗ’ ಶೋಧ ಪ್ರಬಂಧಕ್ಕೆ ಮುಂಬಯಿ ವಿಶ್ವವಿದ್ಯಾಲಯದ ವತಿಯಿದ ಸಂಶೋಧಕಿ ಡಾ.ಲೀಲಾ ಬಿ. ಅವರು ಕೊಡಮಾಡುವ ‘ಶೋಧಸಿರಿ’ ಪುರಸ್ಕಾರ, ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನದ ವತಿಯಿಂದ ವಿಕಾಸ ಪುಸ್ತಕ ಬಹುಮಾನ ಲಭಿಸಿದೆ. ನಿವಾಳಿಸಿಬಿಟ್ಟ ಕೋಳಿ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕೊಡಮಾಡುವ 2022ನೆಯ ಸಾಲಿನ ಕೆ. ವಸುದೇವಾಚಾರ್ಯ ದತ್ತಿ ಪ್ರಶಸ್ತಿ, ಮಾಣಿಕ್ಯ ಪ್ರಕಾಶನ ಹಾಸನದಿಂದ ‘ಪದ್ಮಾವತಿ ವೆಂಕಟೇಶ ದತ್ತಿ ಪುರಸ್ಕಾರ’ ಲಭಿಸಿದೆ. ‘ಮೋಹನ ತರಂಗ’ ಕೃತಿಗೆ 2019-20ನೆಯ ಸಾಲಿನ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಗದು ಪುರಸ್ಕಾರ ಪ್ರಾಪ್ತಿಯಾಗಿದೆ.
“ಅಂತರಂಗದ ಮೃದಂಗ”ದ ಹಸ್ತಪ್ರತಿಗೆ, ಜಗಜ್ಯೋತಿ ಕಲಾವೃಂದ ಮುಂಬಯಿ ವತಿಯಿಂದ “ಶ್ರೀಮತಿ ಸುಶೀಲಾ ಎಸ್ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ” ಹಾಗೂ “ಜನಸ್ಪಂದನ ಟ್ರಸ್ಟ್(ರಿ) ಸುವ್ವಿ ಪಬ್ಲಿಕೇಷನ್ಸ್, ಶಿಕಾರಿಪುರ” ಕೊಡಮಾಡುವ “ಅಲ್ಲಮ ಸಾಹಿತ್ಯ ಪ್ರಶಸ್ತಿ” ಲಭಿಸಿದೆ. 2025ರಲ್ಲಿ ಚೆಂಬೂರು ಕರ್ನಾಟಕ ಸಂಘದ ವತಿಯಿಂದ ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಕ ಪ್ರಶಸ್ತಿ ಲಭಿಸಿದೆ. ಇವರ ಸಾಹಿತ್ಯ ಸಾಧನೆಗೆ ಹಲವಾರು ಪುರಸ್ಕಾರಗಳು ಲಭಿಸಿವೆ. ಇವರು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಡಾ. ಜಿ.ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಸಂಶೋಧನೆಯಲ್ಲಿ ನಿರತರಾಗಿದ್ದಾರೆ.

LEAVE A REPLY

Please enter your comment!
Please enter your name here