ವೈಬ್ರೆಂಟ್ ಕಾಲೇಜಿನ ವಿದ್ಯಾರ್ಥಿಗಳಿಗೆ “ಗೋಲ್ ಸೆಟ್ಟಿಂಗ್” ತರಬೇತಿ ಕಾರ್ಯಾಗಾರ

0
38

ಮೂಡುಬಿದಿರೆ : ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಜೀವನದ ಗುರಿ ನಿರ್ಧಾರ ಹಾಗೂ ಭವಿಷ್ಯದ ಯೋಜನೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ “ಗೋಲ್ ಸೆಟ್ಟಿಂಗ್” ತರಬೇತಿ ಕಾರ್ಯಾಗಾರವನ್ನು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಹರೀಶ್ ನಂಬಿಯಾರ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸ್ಪಷ್ಟ ಗುರಿಯನ್ನು ಹೊಂದಿ, ಅದನ್ನು ಸಾಧಿಸಲು ಸಮರ್ಪಣೆ ಹಾಗೂ ಸೂಕ್ತ ಯೋಜನೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.

ಉಪನ್ಯಾಸಕ ವರ್ಷಾ ಕಾಮತ್ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಲಭ್ಯವಿರುವ ವಿವಿಧ ಶೈಕ್ಷಣಿಕ ಹಾಗೂ ವೃತ್ತಿ ಅವಕಾಶಗಳ ಕುರಿತು ಮಾಹಿತಿ ನೀಡಿದ ಅವರು, ಸರಿಯಾದ ನಿರ್ಧಾರಗಳನ್ನು ಕೈಗೊಂಡು ಯೋಜಿತವಾಗಿ ಮುನ್ನಡೆಯುವ ಅಗತ್ಯವನ್ನು ವಿವರಿಸಿದರು. ಎಸ್‌ಎಂಎಆರ್‌ಟಿ (SMART) ಗೋಲ್ಸ್ ಪರಿಕಲ್ಪನೆ, ಕೌಶಲ್ಯಗಳ ಅಭಿವೃದ್ಧಿ, ಏಕಾಗ್ರತೆ ಹಾಗೂ ಸವಾಲುಗಳನ್ನು ಎದುರಿಸುವ ಸಾಮರ್ಥ್ಯದ ಮಹತ್ವವನ್ನು ಉದಾಹರಣೆಗಳ ಮೂಲಕ ವಿವರಿಸಿದರು.

ವಿದ್ಯಾರ್ಥಿಗಳಲ್ಲಿ ಅನುಭವಾತ್ಮಕ ಕಲಿಕೆಯನ್ನು ಉತ್ತೇಜಿಸಲು ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಗುರಿಮುಖಿ ಚಿಂತನೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿದ್ದ ಕಾಲೇಜಿನ ಟ್ರಸ್ಟಿ ಹಾಗೂ ಪ್ರಾಂಶುಪಾಲ ಡಾ. ಎಸ್. ಎನ್. ವೆಂಕಟೇಶ್ ನಾಯಕ್ ಮಾತನಾಡಿ ವಿದ್ಯಾರ್ಥಿಗಳ ಜೀವನ ಹಾಗೂ ವೃತ್ತಿ ಕೌಶಲ್ಯಗಳನ್ನು ವೃದ್ಧಿಸುವ ಇಂತಹ ಕಾರ್ಯಕ್ರಮಗಳ ಮಹತ್ವವನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ವೈಬ್ರೆಂಟ್ ಕಾಲೇಜಿನ ಟ್ರಸ್ಟಿಗಳಾದ ಸುಭಾಷ್ ಝಾ, ಡಾ. ಶರತ್ ಗೋರೆ, ಮೆಹಬೂಬ್ ಬಾಷಾ, ಚಂದ್ರಶೇಖರ್ ರಾಜೇ ಅರಸ್ ಹಾಗೂ ಯೋಗೇಶ್ ಬೆಡೆಕರ್ ಉಪಸ್ಥಿತರಿದ್ದರು.
.

LEAVE A REPLY

Please enter your comment!
Please enter your name here