ಉಡುಪಿ: ಕೊಡವೂರು ಗ್ರಾಮದಲ್ಲಿ ದಿನಸಿ ಪದಾರ್ಥ ಖರೀದಿಸುವ ನೆಪದಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ವೃದ್ಧ ಗೂಡಂಗಡಿ ಮಾಲೀಕರ ಕುತ್ತಿಗೆಯಲ್ಲಿದ್ದ ಒಂದೂವರೆ ಪವನ್ ಚಿನ್ನದ ಸರವನ್ನು ಬಲವಂತವಾಗಿ ಕಸಿದುಕೊಂಡು ಬೈಕ್ನಲ್ಲಿ ಪರಾರಿಯಾಗಿದ್ದಾನೆ.
ಕೊಡವೂರು ಗ್ರಾಮದ ಕಡವಿನ ಬಾಗಿಲ ವಿಠೋಭ ರುಖುಮಾಯಿ ಭಜನಾ ಮಂದಿರದ ಹತ್ತಿರ ಗೂಡಂಗಡಿ ಹೊಂದಿರುವ ವಿಠಲ ಸುವರ್ಣ (76) ಭಾನುವಾರ ಮಧ್ಯಾಹ್ನ ಗೂಡಂಗಡಿಯಲ್ಲಿ ವ್ಯಾಪಾರದಲ್ಲಿ ತೊಡಗಿದ್ದಾಗ ಮೋಟಾರು ಸೈಕಲ್ನಲ್ಲಿ ಬಂದ ಇಬ್ಬರು ಅಪರಿಚಿತರು ಅಂಗಡಿಯ ಸ್ವಲ್ಪ ಮುಂದೆ ವಾಹನ ನಿಲ್ಲಿಸಿದ್ದಾರೆ. ಬಳಿಕ ಬೈಕ್ ಹಿಂಬದಿ ಕುಳಿತಿದ್ದ ವ್ಯಕ್ತಿ ಅಂಗಡಿಗೆ ಬಂದು ವಿಮಲ್ ಕೇಳಿ 20 ರೂ. ನಗದು ಡಬ್ಬಿಯ ಪಕ್ಕ ಇಟ್ಟಿದ್ದಾನೆ.
ಡಬ್ಬಿಯಿಂದ ವಿಮಲ್ ತೆಗೆದುಕೊಡುವ ಸಮಯದಲ್ಲಿ ಅಪರಿಚಿತ ವ್ಯಕ್ತಿ ಕೈಗಳಿಂದ ಅವರನ್ನು ಬಲವಂತವಾಗಿ ಒತ್ತಿ ಹಿಡಿದು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡು, ರಸ್ತೆಯಲ್ಲಿ ಕಾಯುತ್ತಿದ್ದ ಮೋಟಾರು ಸೈಕಲ್ ಏರಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

