ರಸ್ತೆಯಲ್ಲಿ ಸಿಕ್ಕ ₹6.5 ಲಕ್ಷದ ಚಿನ್ನದ ಸರ : 7ನೇ ತರಗತಿ ವಿದ್ಯಾರ್ಥಿನಿಯ ಪ್ರಾಮಾಣಿಕತೆಗೆ ಮೆಚ್ಚುಗೆ

0
23

ಉಪ್ಪಿನಂಗಡಿ : ರಸ್ತೆಯಲ್ಲಿ ಬಿದ್ದು ಸಿಕ್ಕಿದ್ದ ಸುಮಾರು 5 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ತನ್ನದಲ್ಲ ಎಂದು ಅರಿತು, ಹೆತ್ತವರೊಂದಿಗೆ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಪ್ರಾಮಾಣಿಕತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿದ್ಯಾರ್ಥಿನಿಯ ಪ್ರಾಮಾಣಿಕತೆಯಿಂದಾಗಿ ಸುಮಾರು ₹6.5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಅದರ ನೈಜ ವಾರಸುದಾರರ ಕೈ ಸೇರಿದೆ.

ಉಪ್ಪಿನಂಗಡಿಯ ಅಂಡರ್‌ಪಾಸ್‌ ಬಳಿ ಗುರುವಾರ ಇಂದ್ರಪ್ರಸ್ಥ ವಿದ್ಯಾಲಯದ 7ನೇ ತರಗತಿ ವಿದ್ಯಾರ್ಥಿನಿ ಸಮೀಕ್ಷಾ ಅವರಿಗೆ ರಸ್ತೆಯಲ್ಲಿ ಸುಮಾರು 5 ಪವನ್ ತೂಕದ ಚಿನ್ನದ ಕರಿಮಣಿ ಸರ ಬಿದ್ದು ಸಿಕ್ಕಿತ್ತು. ಚಿನ್ನಾಭರಣವನ್ನು ತಮ್ಮಲ್ಲೇ ಇಟ್ಟುಕೊಳ್ಳದೆ, ಹಿರೇಬಂಡಾಡಿ ಗ್ರಾಮದ ಕರೆಂಕಿ ಮನೆ ನಿವಾಸಿಗಳಾದ ತಮ್ಮ ಹೆತ್ತವರಾದ ಸಂಜೀವ ಮತ್ತು ವಿಜಯಲಕ್ಷ್ಮಿ ಅವರೊಂದಿಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಒಪ್ಪಿಸಿದರು.

ವಾರಸುದಾರರ ಹುಡುಕಾಟಕ್ಕೆ ಪೊಲೀಸರ ಪ್ರಯತ್ನ

ಇದೇ ವೇಳೆ ರಾಮನಗರ ನಿವಾಸಿ ನಾರಾಯಣ ಕೆ. ಅವರ ಪತ್ನಿ ಭವ್ಯ ಕುಮಾರಿ ಅವರು ತಮ್ಮ ಚಿನ್ನದ ಕರಿಮಣಿ ಸರ ಕಳೆದುಹೋಗಿರುವುದರಿಂದ ರಸ್ತೆಯುದ್ದಕ್ಕೂ ಹುಡುಕಾಟ ನಡೆಸುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ವಿಚಾರಿಸಿದಾಗ, ಸುಮಾರು 5 ಪವನ್ ತೂಕದ ಕರಿಮಣಿ ಸರ ಕಳೆದುಹೋಗಿರುವುದಾಗಿ ಅವರು ತಿಳಿಸಿದ್ದಾರೆ.

ಭವ್ಯ ಕುಮಾರಿ ನೀಡಿದ ಚಿನ್ನಾಭರಣದ ವಿವರಗಳು ಹಾಗೂ ವಿದ್ಯಾರ್ಥಿನಿ ಪೊಲೀಸರಿಗೆ ತಂದೊಪ್ಪಿಸಿದ ಚಿನ್ನದ ಸರದ ವಿವರಗಳು ಹೊಂದಿಕೆಯಾಗಿದ್ದವು. ಪರಿಶೀಲನೆಯ ಬಳಿಕ ಅದು ಭವ್ಯ ಕುಮಾರಿ ಅವರದ್ದೇ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ, ಶುಕ್ರವಾರ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿಯ ತಾಯಿ ವಿಜಯಲಕ್ಷ್ಮಿ ಅವರ ಕೈಯಿಂದಲೇ ಚಿನ್ನದ ಸರವನ್ನು ಭವ್ಯ ಕುಮಾರಿ ಅವರಿಗೆ ಹಸ್ತಾಂತರಿಸಲಾಯಿತು.

ವಿದ್ಯಾರ್ಥಿನಿಯ ಪ್ರಾಮಾಣಿಕತೆಗೆ ಪೊಲೀಸ್ ಮೆಚ್ಚುಗೆ

ತನ್ನದಲ್ಲದ ಸೊತ್ತು ಎಷ್ಟೇ ಬೆಲೆಬಾಳುವದಾಗಿದ್ದರೂ ಅದನ್ನು ತನ್ನ ಬಳಿ ಇಟ್ಟುಕೊಳ್ಳದೆ, ಅದರ ವಾರಸುದಾರರಿಗೆ ತಲುಪಿಸುವ ಉದ್ದೇಶದಿಂದ ಹೆತ್ತವರೊಂದಿಗೆ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ ವಿದ್ಯಾರ್ಥಿನಿ ಸಮೀಕ್ಷಾಳ ನಡೆ ಶ್ಲಾಘನೀಯವಾಗಿದೆ.

ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿ ಸುತೇಶ್ ಅವರು ವಿದ್ಯಾರ್ಥಿನಿಯ ಪ್ರಾಮಾಣಿಕತೆಯನ್ನು ಪ್ರಶಂಸಿಸಿ, ಆಕೆಯ ಉತ್ತಮ ಸಂಸ್ಕಾರ ಮತ್ತು ಪ್ರಾಮಾಣಿಕತೆಯಿಂದಾಗಿ ಮಾರುಕಟ್ಟೆ ದರದಲ್ಲಿ ಸುಮಾರು ₹6.5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಅದರ ನೈಜ ವಾರಸುದಾರರ ಕೈಗೆ ಮರಳುವಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಮೀಕ್ಷಾಳ ಪ್ರಾಮಾಣಿಕ ನಡೆಗೆ ಶಾಲಾ ಶಿಕ್ಷಕರು, ಪೋಷಕರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.