ಕರ್ನಾಟಕದಲ್ಲಿ ಕೃತಕ ಪನ್ನೀರ್‌ಗೆ 1 ವರ್ಷ ನಿಷೇಧ; ಆಹಾರ ಸುರಕ್ಷತಾ ಇಲಾಖೆ ಆದೇಶ

0
22

ಬೆಂಗಳೂರು : ಕರ್ನಾಟಕದಲ್ಲಿ ಕೃತಕ ಪನ್ನೀರ್‌ (ಅನಲಾಗ್/ನಾನ್-ಡೈರಿ ಪನ್ನೀರ್) ಬಳಕೆ, ತಯಾರಿಕೆ, ಸಂಗ್ರಹಣೆ, ಪೂರೈಕೆ ಹಾಗೂ ಮಾರಾಟಕ್ಕೆ ಒಂದು ವರ್ಷದ ಅವಧಿಗೆ ನಿಷೇಧ ಹೇರಲಾಗಿದೆ. ಈ ಕುರಿತು ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯಾದ್ಯಂತ ಪನ್ನೀರ್ ಹೆಸರಿನಲ್ಲಿ ಅನಲಾಗ್ ಪನ್ನೀರ್ ತಯಾರಿಸಿ ಮಾರಾಟ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕೃತಕ ಪನ್ನೀರ್ ಬಳಕೆಯನ್ನು ತಡೆಯುವ ಉದ್ದೇಶದಿಂದ ನಿಷೇಧ ಜಾರಿಗೊಳಿಸಲಾಗಿದೆ.

ರಾಜ್ಯದಲ್ಲಿ ವಿವಿಧ ಮಾದರಿಯ ಪನ್ನೀರ್‌ಗಳನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಪರೀಕ್ಷಿಸಿದ್ದು, ಪರೀಕ್ಷಿಸಲಾದ ಮಾದರಿಗಳಲ್ಲಿ ಸಸ್ಯಜನ್ಯ ಎಣ್ಣೆ ಅಥವಾ ಕೊಬ್ಬು ಸೇರಿದಂತೆ ಇತರ ಡೈರಿ ಪದಾರ್ಥಗಳ ಕಲಬೆರಕೆ ಕಂಡುಬಂದಿಲ್ಲ ಎಂದು ತಿಳಿಸಲಾಗಿದೆ. ಆದಾಗ್ಯೂ, ನೈಜ ಹಾಲಿನ ಉತ್ಪನ್ನವಲ್ಲದ ಅನಲಾಗ್ ಪನ್ನೀರ್‌ ಬಳಕೆಯ ಕುರಿತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.

ತಯಾರಿಕೆ, ಮಾರಾಟಕ್ಕೂ ನಿರ್ಬಂಧ

ನಿಷೇಧದ ಅವಧಿಯಲ್ಲಿ ಅನಲಾಗ್ ಅಥವಾ ನಾನ್-ಡೈರಿ ಪನ್ನೀರ್ ಅನ್ನು ಯಾವುದೇ ಆಹಾರ ಉತ್ಪನ್ನ ಅಥವಾ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಸುವುದು, ಸಂಗ್ರಹಿಸುವುದು, ಪೂರೈಸುವುದು ಹಾಗೂ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಗದಿಪಡಿಸಿರುವ ನಿರ್ದಿಷ್ಟ ಗುಣಮಟ್ಟದ ಮಾನದಂಡಗಳಿಗೆ ಒಳಪಡುವ ಹಾಗೂ ಪ್ರಮಾಣೀಕರಿಸಲ್ಪಟ್ಟ ಡೈರಿ ಉತ್ಪನ್ನಗಳಿಗೆ ಈ ಆದೇಶದ ಅನ್ವಯಿಸುವಿಕೆ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಆಹಾರ ವ್ಯಾಪಾರಿಗಳು ಹಾಗೂ ಪನ್ನೀರ್ ತಯಾರಕರು ನಿಷೇಧಿತ ಅನಲಾಗ್ ಪನ್ನೀರ್‌ನ್ನು ಬಳಸದೆ, ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಲಾಖೆ ಸೂಚಿಸಿದೆ.