ಪೊಲೀಸ್ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ; 253 ಪಿಎಸ್‌ಐ ಹುದ್ದೆಗಳ ನೇರ ನೇಮಕಾತಿಗೆ ಚಾಲನೆ

0
23

ಬೆಂಗಳೂರು : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಸೇರಲು ಕನಸು ಕಾಣುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿಯೊಂದು ದೊರೆತಿದೆ. ರಾಜ್ಯ ಪೊಲೀಸ್ ಇಲಾಖೆಯು ಸಿವಿಲ್ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (PSI) ಹುದ್ದೆಗಳ ಭರ್ತಿಗೆ ಸಿದ್ಧತೆ ಆರಂಭಿಸಿದ್ದು, ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

600 ಹುದ್ದೆಗಳಿಗೆ ಅನುಮತಿ, ಮೊದಲ ಹಂತದಲ್ಲಿ 253 ಹುದ್ದೆಗಳ ಭರ್ತಿ

ರಾಜ್ಯ ಸರ್ಕಾರವು ಒಟ್ಟು 600 ಸಿವಿಲ್ ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿದೆ. ಈ ಪೈಕಿ ಪ್ರಸ್ತುತ ಖಾಲಿ ಇರುವ 253 ಹುದ್ದೆಗಳನ್ನು ಮೊದಲ ಹಂತದಲ್ಲಿ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ.

ಡಿಜಿ ಮತ್ತು ಐಜಿಪಿ ಕಚೇರಿಯಿಂದ ಆದೇಶ

ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (DG & IGP) ಕಚೇರಿಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಕೆಸಿಎಸ್ ನಿಯಮ-32ರ ಅಡಿಯಲ್ಲಿ ಸ್ವತಂತ್ರ ಪ್ರಭಾರದಲ್ಲಿರುವ ಹುದ್ದೆಗಳನ್ನೂ ಪರಿಗಣಿಸಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಸೂಚನೆ ನೀಡಲಾಗಿದೆ.

ಮುಂದಿನ ವರ್ಷದ ಖಾಲಿ ಹುದ್ದೆಗಳಿಗೂ ಯೋಜನೆ

ಪ್ರಸ್ತುತ ಖಾಲಿ ಇರುವ ಹುದ್ದೆಗಳ ಜೊತೆಗೆ, ಮುಂದಿನ ವರ್ಷ ನೇರ ನೇಮಕಾತಿ ವ್ಯಾಪ್ತಿಯಲ್ಲಿ ಖಾಲಿಯಾಗಲಿರುವ ಹುದ್ದೆಗಳನ್ನೂ ಗುರುತಿಸಿ, ಅವುಗಳನ್ನು ಸೇರಿಸಿಕೊಂಡು ಒಟ್ಟಾರೆ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಈ ಕ್ರಮದಿಂದ ಮುಂಬರುವ ದಿನಗಳಲ್ಲಿ ಪಿಎಸ್‌ಐ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ದೊರೆಯುವ ನಿರೀಕ್ಷೆ ಮೂಡಿದೆ. ನೇಮಕಾತಿ ಅಧಿಸೂಚನೆ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಪರೀಕ್ಷಾ ವೇಳಾಪಟ್ಟಿಯನ್ನು ಪೊಲೀಸ್ ನೇಮಕಾತಿ ವಿಭಾಗವು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆ ಇದೆ.