ಕಾರ್ಕಳ : ವ್ಯಸನ ಮುಕ್ತ ಸಂಕಲ್ಪದೊಂದಿಗೆ ಪರಿಪೂರ್ಣ ಸಮಾಜ ಕಟ್ಟುವ ಪಣತೊಡೋಣ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು. ಉಡುಪಿ ಜಿಲ್ಲಾ ಪೊಲೀಸ್ ಕಾರ್ಕಳ ಉಪವಿಭಾಗದ ವತಿಯಿಂದ ಜು. 22 ರಂದು ಮಂಜುನಾಥ ಪೈ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ವಾರ್ ಅಗೈನೆಸ್ಟ್ ಡ್ರಗ್ಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವಸಮುದಾಯ ಮಾದಕ ವ್ಯಸನಗಳಿಗೆ ಒಳಗಾದರೆ ದೇಶ ದುರ್ಬಲವಾಗುತ್ತದೆ. ದೇಶವನ್ನು ಪ್ರೀತಿಸುವವರು ಈ ರೀತಿಯ ಕೃತ್ಯವೆಸಗುವುದಿಲ್ಲ ಎಂದ ಅವರು ಒಂದು ದಿನ ಪಡೆದ ಡ್ರಗ್ಸ್ ಜೀವನವಿಡೀ ವ್ಯಸನಕ್ಕೆ ದಾಸರಾಗುವಂತೆ ಮಾಡಲಿದೆ. ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ವ್ಯಸನದ ಪರಿಣಾಮ ಅಪರಾಧಿ ಚಟುಚಟಿಕೆಗಳು ನಡೆಯುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತಾಲೂಕು ಆರೋಗ್ಯಾಧಿಕಾರಿ ಸಂದೀಪ್ ಕುಡ್ವ ಮಾತನಾಡಿ, ಪ್ರಸ್ತುತ ಯುವ ಜನತೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಆದರೆ, ಡ್ರಗ್ಸ್ ಅಥವಾ ಮಾದಕ ವಸ್ತುಗಳ ವ್ಯಸನ ಕೇವಲ ವ್ಯಸನಿಗೆ ಮಾತ್ರವಲ್ಲ. ಆತನ ಕುಟುಂಬದ ಮೇಲೆ ನೇರ ಪರಿಣಾಮ ಬೀರುತ್ತದೆ. ಅಲ್ಲದೆ ದೇಶಕ್ಕೆ ಹೊರೆಯಾಗಿ ಪರಿಣಮಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಡಿವೈಎಸ್ಪಿ ವಿಜಯ ಪ್ರಸಾದ್ ಮಾತನಾಡಿ, ಡ್ರಗ್ಸ್ ಸೇವನೆ, ಮಾರಾಟ ವಿಚಾರವಾಗಿ ಕರಾವಳಿ ರಾಜ್ಯದಲ್ಲೇ ಮೂರನೇ ಸ್ಥಾನದಲ್ಲಿರುವುದು ಆಘಾತಕಾರಿ. ಡ್ರಗ್ಸ್ ಪಿಡುಗನ್ನು ತೊಲಗಿಸಲು ನಾವೆಲ್ಲರೂ ಕಟಿಬದ್ಧರಾಗೋಣ. 2028ಕ್ಕೆ ಡ್ರಗ್ಸ್ ಮುಕ್ತ ಸಮಾಜ ಕಟ್ಟುವ ಸರಕಾರದ ಉದ್ದೇಶವನ್ನು ಸಾಕಾರಗೊಳಿಸೋಣ ಎಂದು ಹೇಳಿದ ಅವರು ವಿದ್ಯಾರ್ಥಿಗಳು ತಮ್ಮ ಕುಟುಂಬ, ಶಿಕ್ಷಕರು, ಹಿತೈಷಿಗಳ ಮಾರ್ಗದರ್ಶನದೊಂದಿಗೆ ಮುನ್ನಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಯಾವುದೇ ವ್ಯಸನಕ್ಕೊಳಗಾಗಿ ಜೀವನ ಹಾಳು ಮಾಡಿಕೊಳ್ಳಬಾರದೆಂದು ಕಿವಿಮಾತು ಹೇಳಿದರು.
ಉಪತಹಶೀಲ್ದಾರ್ ಮಂಜುನಾಥ್, ಶಿಕ್ಷಣಾಧಿಕಾರಿ ಗಿರಿಜಮ್ಮ ಎಸ್., ನಗರ ಪೊಲೀಸ್ ಉಪನಿರೀಕ್ಷಕ ಶಿವಕುಮಾರ್, ಕಾರ್ಕಳ ಗ್ರಾಮಾಂತರ ಠಾಣೆಯ ಪಿಎಸ್ಐ (ತನಿಖೆ) ನವೀನ್, ಅಜೆಕಾರು ಪೊಲೀಸ್ ಉಪನಿರೀಕ್ಷಕ ಲೋಹೀತ್, ಪ್ರೋಬೆಷನರಿ ಪಿಎಸ್ಐ ಸೀಮಾ ಅಂಜುಂ, ನಿಟ್ಟೆ ವಿದ್ಯಾಸಂಸ್ಥೆ ಕ್ಯಾಂಪಸ್ ನಿರ್ದೇಶಕ ಯೊಗೀಶ್ ಹೆಗ್ಡೆ ವೇದಿಕೆಯಲ್ಲಿದ್ದರು. ಕಾರ್ಕಳ ತಾಲೂಕಿನ ವಿವಿಧ ಪಿಯು, ಪದವಿ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎಎಸ್ಐ ಗಣೇಶ್ ಪ್ರಾರ್ಥಿಸಿದರು. ವೃತ್ತ ನಿರೀಕ್ಷಕ ಸಂದೀಪ್ ಜಿ.ಎಸ್. ಸ್ವಾಗತಿಸಿದರು. ಅಜಿತ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಕಳ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಎಂ.ಎಸ್. ವಂದಿಸಿದರು.

