ಬಾಹ್ಯಾಕಾಶ ವಿಜ್ಞಾನ ಆಸಕ್ತರಿಗೆ ಗುಡ್ ನ್ಯೂಸ್: ಇಸ್ರೋ URSC ಇಂಟರ್ನ್‌ಶಿಪ್‌ಗೆ ಅರ್ಜಿ ಆಹ್ವಾನ

0
46

ಭಾರತೀಯ ಬಾಹ್ಯಾಕಾಶ ಸಂಸ್ಥೆ ಯ (ISRO) ಅತ್ಯಂತ ಪ್ರತಿಷ್ಠಿತ ಕೇಂದ್ರಗಳಲ್ಲಿ ಒಂದಾದ ಬೆಂಗಳೂರಿನ ಯು.ಆರ್. ರಾವ್ ಉಪಗ್ರಹ ಕೇಂದ್ರವು (URSC) ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ಗೆ (Internship) ಅರ್ಜಿ ಆಹ್ವಾನಿಸಿದೆ. ಬಾಹ್ಯಾಕಾಶ ವಿಜ್ಞಾನ (Space Science), ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಇದು ಪ್ರಾಯೋಗಿಕ ಜ್ಞಾನವನ್ನು ಪಡೆಯಲು ಮತ್ತು ಇಸ್ರೋ ವಿಜ್ಞಾನಿಗಳೊಂದಿಗೆ ಕಲಿಯಲು ಒಂದು ಅತ್ಯುತ್ತಮ ಅವಕಾಶವಾಗಿದೆ. URSC ಯಲ್ಲಿ ಈ ಇಂಟರ್ನ್‌ಶಿಪ್‌ಗಾಗಿ ಮುಂದಿನ ಅರ್ಜಿ ಪ್ರಕ್ರಿಯೆಯು ಆಗಸ್ಟ್‌ 3 ರಿಂದ ಪ್ರಾರಂಭವಾಗಲಿದೆ.

ಇಂಟರ್ನ್‌ಶಿಪ್‌ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಹಿನ್ನೆಲೆ, ಪ್ರಸ್ತುತ ಓದುತ್ತಿರುವ ಕೋರ್ಸ್ ಮತ್ತು ಇಸ್ರೋದಲ್ಲಿ ಲಭ್ಯವಿರುವ ಯೋಜನೆಗಳ ಆಧಾರದ ಮೇಲೆ ಕೆಲಸವನ್ನು ನಿಯೋಜಿಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನ ಮತ್ತು ಕೌಶಲ್ಯಕ್ಕೆ ತಕ್ಕಂತೆ ನೈಜ ಸಂಶೋಧನೆ ಹಾಗೂ ತಾಂತ್ರಿಕ ಕಾರ್ಯಗಳನ್ನು ಅರ್ಥಮಾಡಿಕೊಳ್ಳಲು ಇಸ್ರೋ ಸೂಕ್ತ ಅವಕಾಶವನ್ನು ಕಲ್ಪಿಸಿಕೊಡಲಿದೆ.

‘ಮೊದಲು ಬಂದವರಿಗೆ ಮೊದಲ ಆದ್ಯತೆ’:

URSC ಸ್ಪಷ್ಟಪಡಿಸಿರುವ ಪ್ರಕಾರ, ಈ ಇಂಟರ್ನ್‌ಶಿಪ್‌ನಲ್ಲಿ ಪ್ರಾಜೆಕ್ಟ್‌ಗಳ ಹಂಚಿಕೆಯನ್ನು “ಫಸ್ಟ್ ಕಮ್, ಫಸ್ಟ್ ಸರ್ವ್” (First Come, First Served) ಅಂದರೆ ‘ಮೊದಲು ಬಂದವರಿಗೆ ಮೊದಲ ಆದ್ಯತೆ’ ಎಂಬ ಆಧಾರದ ಮೇಲೆ ಮಾಡಲಾಗುತ್ತದೆ. ಇಲ್ಲಿ ಸೀಟುಗಳ ಸಂಖ್ಯೆ ಅತ್ಯಂತ ಸೀಮಿತವಾಗಿರುವುದರಿಂದ, ಅರ್ಜಿ ಪ್ರಕ್ರಿಯೆ ಪ್ರಾರಂಭವಾದ ತಕ್ಷಣವೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದು ಸೂಕ್ತ. ತಡವಾಗಿ ಅರ್ಜಿ ಸಲ್ಲಿಸಿದರೆ ಅವಕಾಶ ಕೈತಪ್ಪುವ ಸಾಧ್ಯತೆ ಇರುತ್ತದೆ.

ಈ ಇಂಟರ್ನ್‌ಶಿಪ್ ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಆರ್ಥಿಕ ಸಹಾಯ ಅಥವಾ ಸ್ಟೈಪೆಂಡ್ (Stipend) ನೀಡಲಾಗುವುದಿಲ್ಲ. ಇದರೊಂದಿಗೆ, ಸಂಸ್ಥೆಯ ಕಡೆಯಿಂದ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯವನ್ನೂ (Accommodation) ಒದಗಿಸುವುದಿಲ್ಲ. ಹೀಗಾಗಿ, ಆಯ್ಕೆಯಾಗುವ ಅಭ್ಯರ್ಥಿಗಳು ತಮ್ಮ ಪ್ರಯಾಣ ಮತ್ತು ವಾಸ್ತವ್ಯದ ವ್ಯವಸ್ಥೆಯನ್ನು ಸ್ವತಃ ತಾವೇ ಮಾಡಿಕೊಳ್ಳಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಥಿಗಳು ಶೈಕ್ಷಣಿಕ ದಾಖಲೆಗಳು, ರೆಸ್ಯೂಮ್ ಹಾಗೂ ಕಾಲೇಜಿನ ಅನುಮತಿ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಜೊತೆಗೆ ತಮ್ಮ ಅಧ್ಯಯನ ಕ್ಷೇತ್ರವು URSCಯ ಕಾರ್ಯಕ್ಷೇತ್ರಕ್ಕೆ ಹೊಂದಿಕೆಯಾಗುತ್ತದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಸೂಕ್ತ.

ಅಧಿಕೃತ ಮಾಹಿತಿ ಹಾಗೂ ಅರ್ಜಿ ವಿವರಗಳಿಗಾಗಿ ವಿದ್ಯಾರ್ಥಿಗಳು ಇಸ್ರೋ ಮತ್ತು URSC ಅಧಿಕೃತ ವೆಬ್‌ಸೈಟ್‌ಗಳನ್ನು ಪರಿಶೀಲಿಸಬಹುದು.

LEAVE A REPLY

Please enter your comment!
Please enter your name here