ಸೇವಾವಧಿಯ ನಿಯಮಗಳ ಕುರಿತು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು, ‘ಎ’ ಮತ್ತು ‘ಬಿ’ ವೃಂದದ ಹುದ್ದೆಗಳಿಗೆ 2 ವರ್ಷ, ‘ಸಿ’ ವೃಂದದ ಹುದ್ದೆಗಳಿಗೆ 4 ವರ್ಷ ಹಾಗೂ ‘ಡಿ’ ವೃಂದದ ಹುದ್ದೆಗಳಿಗೆ 7 ವರ್ಷ ಸೇವಾವಧಿಯನ್ನು ಪೂರ್ಣಗೊಳಿಸದ ಯಾವುದೇ ಸರ್ಕಾರಿ ನೌಕರರನ್ನು ಸಾಮಾನ್ಯವಾಗಿ ವರ್ಗಾವಣೆ ಮಾಡುವಂತಿಲ್ಲ, ಆದರೆ, ಕೆಲವು ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ ನೀಡಲಾಗಿದೆ.
ಒಂದು ಸ್ಥಳದಲ್ಲಿರಬಹುದಾದ ಕನಿಷ್ಠ ಅವಧಿಯನ್ನು ಪೂರ್ಣಗೊಳಿಸಿ ವರ್ಗಾವಣೆಗೆ ಅರ್ಹನಿರುವ ನೌಕರನಿಗೆ ನಿವೃತ್ತನಾಗಲು ಎರಡು ವರ್ಷಕ್ಕಿಂತ ಕಡಿಮೆ ಸೇವಾವಧಿ ಇದ್ದಲ್ಲಿ ಅಥವಾ ನೌಕರನು ವಿಶೇಷ ತಾಂತ್ರಿಕ ವಿದ್ಯಾರ್ಹತೆ ಹೊಂದ್ದಿದ್ದು ಆತನ ಜಾಗಕ್ಕೆ ತಕ್ಷಣಕ್ಕೆ ಬದಲಿ ನೌಕರರು ಲಭ್ಯವಿಲ್ಲದಿದ್ದಲ್ಲಿ ವರ್ಗಾವಣೆಗೆ ವಿನಾಯಿತಿ ಇರುತ್ತದೆ. ಇದಲ್ಲದೆ, ಕೇಂದ್ರ ಸರ್ಕಾರದ ಯೋಜನೆ ಅಥವಾ ಪ್ರಮುಖ ಪ್ಲಾಗ್ ಶಿಪ್ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರ ಸೇವೆಯು ಯೋಜನೆಯ ಅನುಷ್ಠಾನಕ್ಕೆ ಅತ್ಯಗತ್ಯವಾಗಿದ್ದಲ್ಲಿ ಅವರನ್ನೂ ಸದ್ಯಕ್ಕೆ ವರ್ಗಾಯಿಸುವಂತಿಲ್ಲ.
ಒಂದು ವೇಳೆ ಸರ್ಕಾರಿ ನೌಕರನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಯಾಗಿದ್ದು, ಅವರ ಅವಧಿ ಮುಗಿದ 3 ತಿಂಗಳಲ್ಲಿ ಚುನಾವಣೆ ನಡೆಯದಿದ್ದಲ್ಲಿ ಅಂತಹವರನ್ನು ವರ್ಗಾಯಿಸಬಹುದು. ಮರು ಚುನಾಯಿತರಾದಲ್ಲಿ ಕೇವಲ ಎರಡನೇ ಅವಧಿಗೆ ಮಾತ್ರ ಮುಂದುವರಿಯಬಹುದು.ನೌಕರರ ಅವಲಂಬಿತರು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ ವೈದ್ಯಕೀಯ ಮಂಡಳಿಯ ಪ್ರಮಾಣಪತ್ರದ ಆಧಾರದ ಮೇಲೆ ಚಿಕಿತ್ಸೆ ಲಭ್ಯವಿರುವ ಸ್ಥಳಕ್ಕೆ ವರ್ಗಾವಣೆ ನೀಡಬಹುದು.
ವಿಧವೆ ಅಥವಾ ವಿಚ್ಛೇದಿತೆಯಾಗಿದ್ದಲ್ಲಿ ಅವರು ಕೋರಿದ ಅಥವಾ ಹತ್ತಿರದ ಸ್ಥಳಕ್ಕೆ ವರ್ಗಾವಣೆ ನೀಡಲು ಅವಕಾಶ ಕಲ್ಪಿಸಲಾಗಿದೆ. ವಿಶೇಷ ಚೇತನ ನೌಕರರಿಗೆ ನಿಯತಕಾಲಿಕ ಮತ್ತು ಪುನರಾವರ್ತಿತ ವರ್ಗಾವಣೆಗಳಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ನೇಮಕಾತಿ ಅಥವಾ ಪದೋನ್ನತಿಯ ಸಂದರ್ಭದಲ್ಲಿ ಅವರಿಗೆ ಸಾಧ್ಯವಾದಷ್ಟು ಹತ್ತಿರದ ಸ್ಥಳಗಳನ್ನೇ ನಿಯುಕ್ತಿಗೊಳಿಸಬೇಕು. ನೌಕರರ ಅವಲಂಬಿತರು ತೀವ್ರ ಅಂಗವೈಕಲ್ಯ ಹೊಂದಿದ್ದು, ಅವರ ನಿರ್ವಹಣೆಯ ಜವಾಬ್ದಾರಿಯನ್ನು ನೌಕರರೇ ಹೊತ್ತಿದ್ದಲ್ಲಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ವರ್ಗಾವಣೆಯಿಂದ ವಿನಾಯಿತಿ ನೀಡಬಹುದು. ಸೇವಾನಿರತ ನೌಕರರು ತಮ್ಮ ಸೇವೆಯ ಅವಧಿಯಲ್ಲಿ ಅಂಗವಿಕಲರಾದಲ್ಲಿ ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣಪತ್ರವನ್ನು ಹಾಜರುಪಡಿಸಿದರೆ ಅವರನ್ನು ಹತ್ತಿರದ ಸ್ಥಳಕ್ಕೆ ವರ್ಗಾಯಿಸಲು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.
ಪತಿ-ಪತ್ನಿಯರಿಬ್ಬರೂ ಸರ್ಕಾರಿ ನೌಕರರಾಗಿದ್ದು, ಅವರಲ್ಲಿ ಒಬ್ಬರು ವರ್ಗಾವಣೆಗೊಂಡಲ್ಲಿ, ಮತ್ತೊಬ್ಬರು ಕನಿಷ್ಠ ಸೇವಾವಧಿಯನ್ನು ಪೂರ್ಣ ಗೊಳಿಸದಿದ್ದರೂ ಖಾಲಿ ಹುದ್ದೆಯ ಲಭ್ಯತೆಗನುಗುಣವಾಗಿ ಅದೇ ಸ್ಥಳಕ್ಕೆ ಅಥವಾ ಹತ್ತಿರದ ಸ್ಥಳಕ್ಕೆ ವರ್ಗಾವಣೆ ಪಡೆಯಲು ಅವಕಾಶವಿದೆ.
ಈ ಬಾರಿ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ ಪ್ರತಿ ನೌಕರರೂ ಸೇವಾ ದಾಖಲೆಗಳನ್ನು ನಿಖರವಾಗಿ ಒದಗಿಸು ವುದು ಕಡ್ಡಾಯ, ವೈಯಕ್ತಿಕ ಬೇಡಿಕೆಗಳಲ್ಲದೆ, ಇಲಾಖೆಯ ಅಡಳಿತಾತ್ಮಕ ಅಗತ್ಯತೆಗಳನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಿ ವರ್ಗಾವಣೆ ಆದೇಶ ಹೊರಡಿಸಲಾಗುತ್ತದೆ.

