ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ಸರ್ಕಾರ ಸ್ಪಂದಿಸುತ್ತಿಲ್ಲ : : ಸುನಿಲ್ ಕುಮಾರ್ ಹೇಳಿಕೆ

0
25

ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಐದನೇ ದಿನವೂ ಪ್ರತಿಭಟನೆ ಮುಂದುವರಿಸಿದ್ದಾರೆ. ಬಿಸಿಲು, ಚಳಿ ಎನ್ನದೆ ಹಗಲು-ರಾತ್ರಿ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಮಾತ್ರ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಪ್ರತಿಭಟನಾನಿರತ ಮಹಿಳೆಯರು ಬೀದಿಯಲ್ಲೇ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಮಹಿಳಾ ವಿರೋಧಿ ಸರ್ಕಾರ ಎಂಬುದನ್ನು ತೋರಿಸುತ್ತದೆ ಎಂದು ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಟೀಕಿಸಿದರು.

ವಾಯ್ಸ್ : ಉಡುಪಿಯಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವ ಇಚ್ಛೆಯಾಗಲೀ, ಯೋಚನೆಯಾಗಲೀ ಸರ್ಕಾರಕ್ಕೆ ಇದ್ದಂತಿಲ್ಲ. ಪ್ರತಿಭಟನಾಕಾರರಿಗೆ ಅಗತ್ಯ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಅವರ ರಕ್ಷಣೆಗೆ ಮುಂದಾಗಬೇಕು. ಬೇಡಿಕೆಗಳ ಬಗ್ಗೆ ಸಹಾನುಭೂತಿಯಿಂದ ಸ್ಪಂದಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‌ಡಿಎ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವಿದೆ. ಈ ಹಿಂದೆ ಬಿಜೆಪಿ ಗೆದ್ದಿರುವ ಕ್ಷೇತ್ರವಾಗಿರುವುದರಿಂದ ಸಹಜವಾಗಿಯೇ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ರಾಜಕಾರಣದಲ್ಲಿ ಪೈಪೋಟಿ ಸಹಜ. ಎಲ್ಲ ಆಕಾಂಕ್ಷಿಗಳ ನಡುವೆ ಸಹಮತ ಮೂಡಿಸಿ ಎನ್‌ಡಿಎ ಅಭ್ಯರ್ಥಿಯ ಗೆಲುವಿಗೆ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಲಿದ್ದಾರೆ ಎಂದರು.

ಹಿರಿಯೂರು ಉಪಚುನಾವಣೆ ರಾಜ್ಯ ಸರ್ಕಾರದ ಪತನದ ಎರಡನೇ ಮುನ್ಸೂಚನೆಯಾಗಲಿದೆ. ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿರುವುದು ಮೊದಲ ಮುನ್ಸೂಚನೆ. ಇದೀಗ ಉಪಚುನಾವಣೆಯಲ್ಲಿಯೂ ಸೋಲಿನ ಭೀತಿ ಎದುರಾಗಿದೆ. ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಸುನಿಲ್ ಕುಮಾರ್ ಹೇಳಿದರು.