ಉಡುಪಿಯಲ್ಲಿ ಬಾಳೆ ಉತ್ಪನ್ನಗಳ ಮಹಾಮೇಳ: ಬಾಳೆಹಣ್ಣಿನಿಂದ ಬಿಸ್ಕತ್, ಲಡ್ಡು, ಗುಲಾಬ್ ಜಾಮೂನ್

0
7

ಉಡುಪಿ : ಭಾರತದ ಬಾಳೆಹಣ್ಣಿನ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ 18 ಮಂದಿ ರೈತರು ಹಾಗೂ ಉದ್ಯಮಿಗಳು ಉಡುಪಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ‘ಕದಳಿ ವಿಶ್ವದರ್ಶನ’ ಬಾಳೆಹಣ್ಣಿನ ಮೇಳದಲ್ಲಿ ಭಾಗವಹಿಸಲಿದ್ದಾರೆ.

ನವೆಂಬರ್ 29ರಿಂದ ಡಿಸೆಂಬರ್ 1ರವರೆಗೆ ಉಡುಪಿಯ ಶ್ರೀಕೃಷ್ಣ ಮಠದ ವಾಹನ ನಿಲುಗಡೆ ಪ್ರದೇಶದಲ್ಲಿ ಮೂರು ದಿನಗಳ ಕಾಲ ಈ ಮೇಳ ನಡೆಯಲಿದೆ. ಶ್ರೀ ಸೋದೆ ಮಠದ ಬಾಳೆ ಮುಹೂರ್ತದ ಅಂಗವಾಗಿ ಆಯೋಜಿಸಲಾಗಿರುವ ಈ ಪ್ರದರ್ಶನದಲ್ಲಿ ಜಲಗಾಂವ್ ತಂಡವು ನಾಲ್ಕು ಮಳಿಗೆಗಳ ಮೂಲಕ ವಿವಿಧ ಬಗೆಯ ಬಾಳೆಹಣ್ಣು ಹಾಗೂ ಬಾಳೆ ಆಧಾರಿತ ಮೌಲ್ಯವರ್ಧಿತ ಉತ್ಪನ್ನಗಳನ್ನು ಪ್ರದರ್ಶಿಸಲಿದೆ.

ಜಲಗಾಂವ್ ಜಿಲ್ಲೆಯಲ್ಲಿ ವಿಶಾಲ ಪ್ರದೇಶದಲ್ಲಿ ಬಾಳೆ ಕೃಷಿ ನಡೆಯುತ್ತಿದ್ದು, ಗ್ರ್ಯಾಂಡ್ ನೈನ್ (ಜಿ-9) ಪ್ರಮುಖ ತಳಿಯಾಗಿದೆ. ಆದರೆ ರೈತರಿಗೆ ತಮ್ಮ ಬೆಳೆಗೆ ಯಾವಾಗಲೂ ಸೂಕ್ತ ಬೆಲೆ ದೊರೆಯುತ್ತಿಲ್ಲ. ಮಧ್ಯವರ್ತಿಗಳೇ ಹೆಚ್ಚಿನ ಲಾಭ ಪಡೆಯುತ್ತಿರುವುದರಿಂದ ಕೆಲವು ರೈತರು ಬಾಳೆಹಣ್ಣಿನಿಂದ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಉದ್ಯಮಕ್ಕೆ ಮುಂದಾಗಿದ್ದಾರೆ.

ಈ ತಂಡದಲ್ಲಿ ಜಲಗಾಂವ್‌ನ ಅಮೃತಾಯ ಪ್ರೊಸೆಸಿಂಗ್ ಕಂಪನಿ ಪ್ರಮುಖ ಆಕರ್ಷಣೆಯಾಗಿದ್ದು, ತನ್ನ ‘ಇಂಡಿಬಾನಾ’ ಬ್ರ್ಯಾಂಡ್‌ನಡಿ ಹಸಿ ಬಾಳೆಹಣ್ಣಿನ ಹಿಟ್ಟಿನಿಂದ ತಯಾರಿಸಿದ ಆರು ಬಗೆಯ ರೆಡಿ ಮಿಕ್ಸ್ ಉತ್ಪನ್ನಗಳನ್ನು ಪರಿಚಯಿಸಲಿದೆ. ದೋಸೆ, ಉಪ್ಪಿಟ್ಟು, ರೊಟ್ಟಿ ಹಾಗೂ ಗುಜರಾತ್‌ನಲ್ಲಿ ಜನಪ್ರಿಯವಾಗಿರುವ ಥೇಪ್ಲಾ ತಯಾರಿಕೆಗೆ ಬೇಕಾದ ಮಿಶ್ರಣಗಳು ಇದರಲ್ಲಿ ಸೇರಿವೆ.

74 ವರ್ಷದ ಜಲಗಾಂವ್ ರೈತ ಅಶೋಕ್ ಗಾಡೆ ಕೂಡ ತಮ್ಮ ವಿಶಿಷ್ಟ ಬಾಳೆ ಉತ್ಪನ್ನಗಳೊಂದಿಗೆ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ 16 ವರ್ಷಗಳಿಂದ ಬಾಳೆಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಇವರ ‘ಸಂಕಲ್ಪ ಎಂಟರ್‌ಪ್ರೈಸಸ್’ ಸಂಸ್ಥೆಯ ಬಾಳೆ ಬಿಸ್ಕತ್‌ಗೆ ಪೇಟೆಂಟ್ ದೊರೆತಿದೆ. ಬಾಳೆ ಲಡ್ಡು ಹಾಗೂ ಬಾಳೆ ಗುಲಾಬ್ ಜಾಮೂನ್ ಸೇರಿದಂತೆ ಹಲವು ಉತ್ಪನ್ನಗಳನ್ನು ಅವರು ತಯಾರಿಸುತ್ತಿದ್ದಾರೆ.

ಮಹಾರಾಷ್ಟ್ರ ಕೃಷಿ ಇಲಾಖೆಯ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆಯ (ATMA) ನಿವೃತ್ತ ಯೋಜನಾ ನಿರ್ದೇಶಕ ಅನಿಲ್ ವಸಂತರಾವ್ ಭೋಕರೆ ಅವರು ಜಲಗಾಂವ್ ತಂಡದ ನೇತೃತ್ವ ವಹಿಸಲಿದ್ದಾರೆ. ಜಲಗಾಂವ್‌ನ ಪಾಲ್ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಷಯ ತಜ್ಞ ಡಾ. ಮಹೇಶ್ ವಿಠ್ಠಲ್ ಮಹಾಜನ್ ಕೂಡ ತಂಡದಲ್ಲಿ ಭಾಗವಹಿಸಲಿದ್ದಾರೆ.

ನವೆಂಬರ್ 29ರಂದು ಬೆಳಿಗ್ಗೆ 7.45ಕ್ಕೆ ರಥಬೀದಿಯ ಸೋದೆ ಶ್ರೀ ವಾದಿರಾಜ ಮಠದಲ್ಲಿ ಬಾಳೆ ಮುಹೂರ್ತ ನಡೆಯಲಿದೆ. ಬಳಿಕ ಬೆಳಿಗ್ಗೆ 9.30ಕ್ಕೆ ರಾಷ್ಟ್ರಮಟ್ಟದ ಬಾಳೆಹಣ್ಣಿನ ಮೇಳ ಉದ್ಘಾಟನೆಗೊಳ್ಳಲಿದೆ.

ಮೇಳವು ಪ್ರತಿದಿನ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರಲಿದ್ದು, ಪ್ರವೇಶ ಉಚಿತವಾಗಿದೆ. ಬಾಳೆ ಕೃಷಿ, ಸಂಸ್ಕರಣೆ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಕುರಿತು ಮಾಹಿತಿ ಪಡೆಯಲು ರೈತರು, ಉದ್ಯಮಿಗಳು ಹಾಗೂ ಸಾರ್ವಜನಿಕರಿಗೆ ಇದು ಉತ್ತಮ ಅವಕಾಶವಾಗಲಿದೆ.