ಸೋಮವಾರಪೇಟೆ ರಾಜ್ಯೋತ್ಸವ ಸಂಭ್ರಮ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಪ್ರಾಸಿಸ್ ಡಿಸೋಜ ಹಾಗೂ ಸಾಧಕರಿಗೆ ತಾಲೂಕು ಆಡಳಿತದಿಂದ ಭವ್ಯ ಗೌರವ ಸನ್ಮಾನ

0
9

ಸೋಮವಾರಪೇಟೆ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭವು ಅತ್ಯಂತ ಸಡಗಡ-ಸಂಭ್ರಮದಿಂದ ಜರುಗಿತು. ಈ ಹೆಮ್ಮೆಯ ವೇದಿಕೆಯಲ್ಲಿ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಪಟ್ಟಿಯಲ್ಲಿ, ಕಳೆದ 22 ವರ್ಷಗಳಿಂದ ಸತತವಾಗಿ ಕನ್ನಡಪರ ಹೋರಾಟ ಹಾಗೂ ನಿಸ್ವಾರ್ಥ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಕೊಡಗು ಜಿಲ್ಲಾಧ್ಯಕ್ಷರಾದ ಪ್ರಾಸಿಸ್ ಡಿಸೋಜ ಅವರು ಪ್ರಮುಖರಾಗಿದ್ದಾರೆ. ಸಮಾರಂಭದ ನೇತೃತ್ವ ವಹಿಸಿದ್ದ ಮಾನ್ಯ ತಹಶೀಲ್ದಾರರು ಹಾಗೂ ಪ್ರಮುಖ ಗಣ್ಯರು ವೇದಿಕೆಯಲ್ಲಿ ಪ್ರಾಸಿಸ್ ಡಿಸೋಜ ಹಾಗೂ ಇತರ ಸಾಧಕರಿಗೆ ಹಾರ ಹಾಕಿ, ಶಾಲು ಹೊದಿಸಿ, ಫಲ ಪುಷ್ಪ ಹಾಗೂ ಪುಸ್ತಕ ನೀಡಿ ಅತ್ಯಂತ ಗೌರವಪೂರ್ವಕವಾಗಿ ಭವ್ಯವಾಗಿ ಸನ್ಮಾನಿಸಿದರು.
ಪ್ರಾಸಿಸ್ ಡಿಸೋಜ ಅವರು ಬರೋಬ್ಬರಿ 32 ಬಾರಿ ರಕ್ತದಾನ ಮಾಡಿರುವುದಲ್ಲದೆ, ವಿವಿಧೆಡೆ ಬೃಹತ್ ರಕ್ತದಾನ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ.
ರಸ್ತೆ ಬದಿಯಲ್ಲಿದ್ದ 400ಕ್ಕೂ ಹೆಚ್ಚು ನಿರ್ಗತಿಕರು ಮತ್ತು ಅನಾಥರನ್ನು ರಕ್ಷಿಸಿ ಆಶ್ರಮಗಳಿಗೆ ಸೇರಿಸಿದ್ದಾರೆ. ಕೋವಿಡ್ ಮಹಾಮಾರಿ ಹಾಗೂ ಕೊಡಗಿನ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನೂರಾರು ಕುಟುಂಬಗಳಿಗೆ ತಿಂಗಳ ಆಹಾರದ ಕಿಟ್ ವಿತರಿಸಿದ್ದಾರೆ. ಬೆಂಗಳೂರಿನ ಟ್ರಸ್ಟ್‌ಗಳ ಸಹಕಾರದೊಂದಿಗೆ ಮನೆ ಕಳೆದುಕೊಂಡ 13 ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಹಾಗೂ ದುರಸ್ತಿಗೆ ಲಕ್ಷಾಂತರ ರೂಪಾಯಿ ಆರ್ಥಿಕ ನೆರವು ಕಲ್ಪಿಸಿದ್ದಾರೆ. ಅಲ್ಲದೆ, ಬಡವರ ದಾಖಲೆಗಳನ್ನು ಒದಗಿಸಿ 500ಕ್ಕೂ ಹೆಚ್ಚು ಜನರಿಗೆ ಸರ್ಕಾರಿ ಪಿಂಚಣಿ (ಪೆನ್ಷನ್) ದೊರಕಿಸಿಕೊಟ್ಟ ಅಪೂರ್ವ ಸಾಧನೆ ಇವರದ್ದಾಗಿದೆ. ಜೊತೆಗೆ ಪ್ರತಿವರ್ಷ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಹಾಗೂ ರಸ್ತೆ ಸುರಕ್ಷತಾ ಕಾರ್ಯಗಳಲ್ಲೂ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಹಂಸ ಪಕ್ಷಿಯಂತೆ ಸದಾ ಪಾರದರ್ಶಕ ಹಾಗೂ ಪವಿತ್ರ ಮನಸ್ಸಿನಿಂದ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಫ್ರಾನ್ಸಿಸ್ ಡಿಸೋಜ ಅವರ ಸಮಾಜಮುಖಿ ಸೇವೆಗೆ ಸಂದ ಈ ಗೌರವವು ಅತ್ಯಂತ ಸೂಕ್ತವಾಗಿದ್ದು,
ಈ ಸಂದರ್ಭದಲ್ಲಿ ತಾಲೂಕಿನ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಪ್ರಮುಖ ಗಣ್ಯರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದು ಸಾಧಕರಿಗೆ ಶುಭ ಹಾರೈಸಿದರು.