ಶಿವಪುರ ಶಾಲೆಯಲ್ಲಿ ಅದ್ದೂರಿ ಗುರುವಂದನಾ ಕಾರ್ಯಕ್ರಮ : ಶಿಕ್ಷಕರ ಸೇವೆಯನ್ನು ಸ್ಮರಿಸಿ ಗೌರವ ಸಮರ್ಪಣೆ

0
11

ಹೆಬ್ರಿ : ಹೆಬ್ರಿ ತಾಲೂಕಿನ ಶಿವಪುರ–1ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಗುರುವಂದನಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 8ರಂದು ಅತ್ಯಂತ ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಯಡ್ದೆ ರಾಘವೇಂದ್ರ ಪೂಜಾರಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಮೂರ್ಸಾಲು ಮೋಹನದಾಸ ನಾಯಕ್, ಹುಣ್ಸೆಡಿ ಸುರೇಶ್ ಶೆಟ್ಟಿ, ಶೋಭಾ ಶೆಟ್ಟಿ, ತಾಲೂಕು ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷರಾದ ರಮೇಶ್ ಕುಮಾರ್, ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾದ ಸುಮಿತ್ರಾ ನಾಯಕ್, ಶಿವಪುರದ ಉದ್ಯಮಿಗಳಾದ ಗಣೇಶ್ ಕುಲಾಲ್, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷರಾದ ಅನುಸೂಯ ನಾಯಕ್ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗುಲಾಬಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲೆಯ ಶೈಕ್ಷಣಿಕ ಪ್ರಗತಿ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸುತ್ತಿರುವ ಗುಲಾಬಿ, ವೀಣಾ ಕುಮಾರಿ ಎಚ್.ಎನ್., ರಮಾನಂದ ಶೆಟ್ಟಿ, ಶ್ರೀಮತಿ ದಿವ್ಯಾ ಬಿ., ಗೀತಾ ನಾಯಕ್, ಗಾಯತ್ರಿ, ರವೀಂದ್ರ ಶೆಟ್ಟಿ, ಶೈಲಜಾ, ವೀಣಾ ನಾಯಕ್ ಹಾಗೂ ಪುಷ್ಪ ಅವರ ಸೇವೆಯನ್ನು ಸ್ಮರಿಸಿ, ಶಿಕ್ಷಕರ ದಿನಾಚರಣೆಯ ಸವಿ ನೆನಪಿಗಾಗಿ ಅಭಿನಂದಿಸಿ ಗೌರವಿಸಲಾಯಿತು.

ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ; ಮಕ್ಕಳ ಬದುಕಿಗೆ ದಾರಿದೀಪವಾಗಿ, ಜ್ಞಾನ, ಸಂಸ್ಕಾರ ಮತ್ತು ಮೌಲ್ಯಗಳನ್ನು ಬೆಳೆಸುವ ಶಿಲ್ಪಿಗಳು. ಅಂತಹ ಗುರುಗಳ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ ಗೌರವಿಸುವ ಮೂಲಕ ಕಾರ್ಯಕ್ರಮವು ಗುರುವಿನ ಮಹತ್ವವನ್ನು ಸಾರಿತು.

ಇದೇ ಸಂದರ್ಭದಲ್ಲಿ ಶಾಲೆಯ ವಾಹನ ಚಾಲಕರಾದ ನಾಗರಾಜ್, ಕಿರಣ್ ಅಡುಗೆ ಶಾಲಾ ಸಹಾಯಕಿಯಾದ ಪ್ರತಿಮಾ ಹಾಗೂ ಅಡುಗೆ ಸಿಬ್ಬಂದಿಗಳಾದ ಚೆನ್ನಬಸಮ್ಮ, ಮೀನಾಕ್ಷಿ ಮತ್ತು ವಸಂತಿ ಅವರನ್ನು ಸಹ ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷರಾದ ಅನುಸೂಯ ನಾಯಕ್ ಸ್ವಾಗತಿಸಿದರು. ಸಮಿತಿಯ ಸದಸ್ಯರಾದ ನಾಗರಾಜ್ ವಂದನಾರ್ಪಣೆ ಸಲ್ಲಿಸಿದರು. ಪಾಡಿಗಾರದ ಸಚಿನ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ಶಿಕ್ಷಕರ ಸೇವೆಯನ್ನು ಗೌರವಿಸುವುದರ ಜೊತೆಗೆ ಶಾಲೆಯೊಂದಿಗೆ ಸದಾ ಕೈಜೋಡಿಸುತ್ತಿರುವ ಸಮುದಾಯದ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಸಿಬ್ಬಂದಿಯನ್ನೂ ಸ್ಮರಿಸಿ ಗೌರವಿಸಿದ ಈ ಗುರುವಂದನಾ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.