ಗುಲಾಬ್ ಭೂಷಣ ಮುನಿ ಮಹಾರಾಜ್ ಮೂಡುಬಿದಿರೆ ಪುರಪ್ರವೇಶ

0
83


ಮೂಡುಬಿದಿರೆ: ಚಾತುರ್ಮಾಸ ಆಚರಣೆಗಾಗಿ ಆಚಾರ್ಯ ಗುಲಾಬ್ ಭೂಷಣ ಮುನಿ ಮಹಾರಾಜ್ ಬಡಗು ಬಸದಿ ಮೂಲಕ ಶುಕ್ರವಾರ ಪುರ ಪ್ರವೇಶ ಮಾಡಿದರು.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ನೂರಾರು ಮಂದಿ ಶ್ರಾವಕ ಶ್ರಾವಕಿಯರು ಮುನಿಯವರನ್ನು ಸ್ವಾಗತಿಸಿದರು. ಬಳಿಕ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ಅಭಿಷೇಕ ಮಾಡಲಾಯಿತು.
ಧರ್ಮ ಸಂದೇಶ ನೀಡಿದ ಮುನಿಮಹಾರಾಜರು, ಸಂತರು ಮಠದ ಸಂಸ್ಕಾರ ಶಿಕ್ಷಣ ಪಡೆದು ಆತ್ಮ ಕಲ್ಯಾಣ ಮಾರ್ಗದಲ್ಲಿ ಮುಂದುವರಿಯುವವರು. ಇಲ್ಲಿನ ಭಟ್ಟಾರಕರ ಪ್ರೇರಣೆಯಿಂದ ಪುಣ್ಯ ಸ್ಥಳ ಜೈನಕಾಶಿ ಮೂಡುಬಿದಿರೆಯಲ್ಲಿ ಚಾತುರ್ಮಾಸ ಆಚರಣೆ ಮಾಡುವುದು ಬಹು ವರ್ಷಗಳ ಸಂಕಲ್ಪವಾಗಿದೆ. ಇಲ್ಲಿನ ಭಟ್ಟಾರಕ ಸ್ವಾಮೀಜಿ, ಶ್ರಾವಕ, ಶ್ರಾವಕಿಯರ ಭಕ್ತಿ,ಭಾವ ಸಂತೋಷ ನೀಡಿದೆ ಎಂದು ನುಡಿದರು.
ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಕಳೆದ 25 ವರ್ಷಗಳಿಂದ ಮುನಿಗಳು ಸಂತರಾಗಿ ಧರ್ಮ ಜಾಗೃತಿಯನ್ನು ಮಾಡುತ್ತಿದ್ದಾರೆ. ಮನಸ್ಸೆಂಬ ಹೊಲದಲ್ಲಿ ಧರ್ಮದ ಬೀಜ ಬಿತ್ತಲು ಗುರುಗಳು ಬಂದಿರುವುದು ನಮ್ಮ ಭಾಗ್ಯ. ಜುಲೈ 9ರಂದು ಮುನಿಗಳ ಚಾತುರ್ಮಾಸ ಕಲಶ ಸ್ಥಾಪನೆ ನಡೆಯಲಿದೆ
ಎಂದರು.
ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುದೇಶ್, ಆದರ್ಶ್, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಪ್ರಮುಖರಾದ ಶೈಲೇಂದ್ರ ಕುಮಾರ್, ಬಾಹುಬಲಿ ಪ್ರಸಾದ್. ಡಾ.ಎಸ್.ಪಿ ವಿದ್ಯಾ ಕುಮಾರ್, ಶ್ವೇತಾ ಜೈನ್, ರಾಜವರ್ಮ ಬೈಲಂಗಡಿ, ಪೂರ್ಣಚಂದ್ರ, ಗುಣಪಾಲ್ ಹೆಗ್ಡೆ, ಮಂಜುಳಾ ಅಭಯಚಂದ್ರ ಜೈನ್, ಮಠದ ವ್ಯವಸ್ಥಾಪಕ ಸಂಜಯoತ್ ಕುಮಾರ್ ಸಹಿತ ಶ್ರಾವಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here