ಸಂತೆಕಟ್ಟೆ ಮಾರ್ಕೆಟ್ ಹಿಂಭಾಗದಲ್ಲಿ ಕಸದ ರಾಶಿ : ನಗರ ಸಭೆ ವಿರುದ್ಧ ಸತೀಶ್ ಪೂಜಾರಿ ಕೀಳಂಜೆ ಸಾಮಾಜಿಕ ಕಾರ್ಯಕರ್ತರು ಆಗ್ರಹ

0
21

ಉಡುಪಿ : ಉಡುಪಿ ನಗರಸಭೆ ವ್ಯಾಪ್ತಿಯ ಸಂತೆಕಟ್ಟೆಯ ಪುತ್ತೂರು ವಾರ್ಡಿನ ಸಂತೆ ಮಾರ್ಕೆಟ್ ಹಿಂಭಾಗದ ರಸ್ತೆಯಲ್ಲಿ ಕಸದ ರಾಶಿ ದಿನೇ ದಿನೇ ಹೆಚ್ಚುತ್ತಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ವಿವಿಧ ಪ್ರದೇಶಗಳಿಂದ ತಂದು ಹಾಕಲಾಗುತ್ತಿರುವ ಕಸದಿಂದ ಭಾರೀ ದುರ್ವಾಸನೆ ಹರಡುತ್ತಿದ್ದು, ಪರಿಸರ ಮಾಲಿನ್ಯ ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಾರ್ಕೆಟ್ ಹಿಂಭಾಗದ ರಸ್ತೆ ಸಂಪೂರ್ಣ ಗುಂಡಿಗಳಿಂದ ತುಂಬಿಕೊಂಡಿದ್ದು, ವಾಹನ ಸಂಚಾರಕ್ಕೂ ಹಾಗೂ ಸಾರ್ವಜನಿಕರ ಓಡಾಟಕ್ಕೂ ತೊಂದರೆಯಾಗುತ್ತಿದೆ. ರಸ್ತೆಯ ಬದಿಯಲ್ಲಿ ಮಾಂಸದ ತ್ಯಾಜ್ಯ, ಬಾತ್ರೂಮ್ ಸಾಮಗ್ರಿಗಳು ಹಾಗೂ ಕಟ್ಟಡ ಅವಶೇಷಗಳನ್ನು ನಿರ್ಲಕ್ಷ್ಯವಾಗಿ ಬಿಸಾಕಲಾಗುತ್ತಿದ್ದು, ಬೀದಿ ನಾಯಿಗಳ ಕಾಟವೂ ಹೆಚ್ಚಾಗಿದೆ. ಈಗಾಗಲೇ ಹಲವಾರು ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ನಾಯಿಗಳು ಕಚ್ಚಿದ ಘಟನೆಗಳು ನಡೆದಿವೆ ಎಂದು ತಿಳಿದುಬಂದಿದೆ.

ಈ ಭಾಗದಲ್ಲಿ ಫ್ಯಾಕ್ಟರಿಗಳು, ಶೋರೂಂಗಳು ಹಾಗೂ ಸಾವಿರಾರು ಕಾರ್ಮಿಕರ ಸಂಚಾರ ಇದ್ದರೂ, ಮೂಲಭೂತ ಸೌಲಭ್ಯಗಳ ಕೊರತೆಯಿಂದ ಪರಿಸ್ಥಿತಿ ಗಂಭೀರವಾಗಿದೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳಿಗೂ ಈ ಪ್ರದೇಶ ಅಡ್ಡೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸೂಕ್ತ ಸಿಸಿ ಕ್ಯಾಮೆರಾ ಹಾಗೂ ಭದ್ರತಾ ವ್ಯವಸ್ಥೆಯ ಕೊರತೆ ಇದಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಇದೇ ವೇಳೆ ರಸ್ತೆಯ ಬಳಿ ಇರುವ ಹೈಟೆನ್ಷನ್ ವಿದ್ಯುತ್ ಕಂಬ ಅಪಾಯಕಾರಿಯಾಗಿ ವಾಲಿದ್ದು, ಮಳೆಗಾಲದಲ್ಲಿ ಯಾವುದೇ ಕ್ಷಣದಲ್ಲಿ ಕುಸಿಯುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮೆಸ್ಕಾಂ ಅಧಿಕಾರಿಗಳು ಹಾಗೂ ನಗರಸಭೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಮಳೆಯ ರಭಸ ಹೆಚ್ಚಾದರೆ ರಸ್ತೆಯ ಬದಿಯಲ್ಲಿರುವ ಕಸ ಸ್ವರ್ಣ ನದಿಗೆ ಸೇರಿ ಪರಿಸರ ಮಾಲಿನ್ಯ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ತಕ್ಷಣ ಕಸದ ರಾಶಿ ತೆರವುಗೊಳಿಸಿ, ರಸ್ತೆ ದುರಸ್ತಿ, ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ ವಿದ್ಯುತ್ ಕಂಬ ಬದಲಾವಣೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಸತೀಶ್ ಪೂಜಾರಿ ಕೀಳಂಜೆ, ಶ್ರೀರಾಮ ಪೂಜಾರಿ ಸಂತೆಕಟ್ಟೆ, ಅರುಣ್ ಸಂತೆಕಟ್ಟೆ ಹಾಗೂ ಕಿಶೋರ್ ಅಮ್ಮಂಜಿ ಸಾರ್ವಜನಿಕರ ಪರವಾಗಿ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here