ನಮ್ಮ ಭಾರತೀಯ ವೈದ್ಯ ಪದ್ಧತಿಯಲ್ಲಿ ಕುಟುಂಬ ವೈದ್ಯರಿಗೆ ಬಹಳ ಉನ್ನತ ಸ್ಥಾನಂವಿತ್ತು. ಒಂದು ಕಾಲದಲ್ಲಿ ಸಮಾಜದ ಆರೋಗ್ಯದ ಕೇಂದ್ರ ಬಿಂದುವಾಗಿದ್ದ ಕುಟುಂಬ ವೈದ್ಯರು ಈಗ ಕಾಲದ ಹೊಡೆತಕ್ಕೆ ಸಿಕ್ಕಿ ಇಳಿಮುಖವಾಗಿ ಅಳಿವಿನ ದಾರಿಯತ್ತ ಸಾಗುತ್ತಿರುವುದು ನಮ್ಮ ಸಮಾಜ ಯಾವ ಕಡೆಗೆ ತಿರುಗುತ್ತಿದೆ ಎಂಬುದರ ಸೂಚನೆಯನ್ನು ನೀಡುತ್ತಿದೆ. ಕುಟುಂಬ ವೈದ್ಯರು ಅಥವಾ ಫ್ಯಾಮಿಲಿ ಫಿಸಿಷಿಯನ್ ಎಂದರೆ ಅವರು ಕೇವಲ ವೈದ್ಯ ಮಾತ್ರವಲ್ಲ, ಎಲ್ಲರಿಗೂ ಸ್ನೇಹಿತ, ಹಿತೈಷಿ, ಮಾರ್ಗದರ್ಶಕ, ಮತ್ತು ಹಿತಚಿಂತಕ. ಯಾವುದೇ ರೋಗ ಬಂದರೂ ಮೊದಲು ಕಾಣುತ್ತಿದ್ದದ್ದು ನಮ್ಮ ಕುಟುಂಬ ವೈದ್ಯರನ್ನು. ಅದು ಶೀತ, ಜ್ವರ, ಕೆಮ್ಮು, ದಮ್ಮು, ಪಿತ್ತ, ವಾತ, ವಾಂತಿ ಬೇಧಿ, ಏನೇ ಇದ್ದರೂ ಅವರ ಸಲಹೆ ಇಲ್ಲದೆ ಯಾರೊಬ್ಬರೂ ಉನ್ನತ ಚಿಕಿತ್ಸೆಗೆ ತಜ್ಞ ವೈದ್ಯರ ಬಳಿ ಅಥವಾ ದೊಡ್ಡ ದೊಡ್ಡ ತೃತೀಯ ಸ್ತರದ ಆರೋಗ್ಯ ಕೇಂದ್ರಗಳ ಕದ ತಟ್ಟುತಿರಲಿಲ್ಲ.
ಪ್ರತಿ ಬಾರಿಯೂ ಅದೇ ವೈದ್ಯರ ಬಳಿ ಹೋಗುತ್ತಿದ್ದ ಕಾರಣ, ವೈದ್ಯನಿಗೆ ಎಲ್ಲ ರೋಗಿಗಳ ಕೌಟುಂಬಿಕ ಹಿನ್ನೆಲೆ, ರೋಗದ ಚರಿತ್ರೆ, ಅಲರ್ಜಿ ಚರಿತ್ರೆ, ಆರ್ಥಿಕ ಸ್ಥಿತಿಗತಿ, ಸಾಮಾಜಿಕ ಹಿನ್ನೆಲೆ ಎಲ್ಲವೂ ತಿಳಿದಿರುತ್ತಿತ್ತು. ದಿನದ 24ಗಂಟೆಯೂ ಚಿಕಿತ್ಸೆಗೆ ಲಭ್ಯವಿದ್ದು, ಸಲಹೆ, ಮಾರ್ಗದರ್ಶನ ಮತ್ತು ಚಿಕಿತ್ಸೆ ನೀಡುತ್ತಿದ್ದರೂ, ಅಗತ್ಯವಿದ್ದರೆ ಮನೆಗೂ ಬಂದು ಚುಚ್ಚು ಮದ್ದು ನೀಡಿ, ಸಾಂತ್ವನ ಹೇಳಿ ರೋಗ ವಾಸಿ ಮಾಡುತ್ತಿದ್ದರು, ರೋಗಿ ಬಂದ ಬಳಿಕ ಒಂದಷ್ಟು ಲೋಕಾಭಿರಾಮದ ಹರಟೆ, ಕುಟುಂಬದವರ ಆರೋಗ್ಯದ ವಿಚಾರಣೆ, ಸುಖದು:ಖಗಳ ವಿನಿಮಯ, ನಂತರವೇ ಚಿಕಿತ್ಸೆ ಬಗ್ಗೆ ನಿರ್ಣಯ ಮಾಡುತ್ತಿದ್ದರು.
ವೈದ್ಯ ಒಂದು ರೀತಿಯಲ್ಲಿ ರೋಗಿಯ ಕುಟುಂಬದ ಒಂದು ಭಾಗವಾಗಿಯೇ ಇರುತ್ತಿದ್ದರು. ಮನೆಯಲ್ಲಿ ಏನಾದರೂ ವಿಶೇಷ ಕಾರ್ಯಕ್ರಮವಿದ್ದಲ್ಲಿ, ವೈದ್ಯರು ಎಷ್ಟು ಹೊತ್ತಿಗಾದರೂ ಒಂದು ಹಾಜರಿ ಹಾಕಿ ಎಲ್ಲರೊಂದಿಗೆ ಬೆರೆತು ಖುಷಿ ಪಡಿಸಿ ಹೋಗುತ್ತಿದ್ದರು. ವೈದ್ಯರೊಂದಿಗಿನ ಸಂಬAಧ ಮಧುರವಾಗಿತ್ತು ಮತ್ತು ರೋಗಿಗಳ ಚಿಕಿತ್ಸೆ ಕೂಡಾ ತೃಪ್ತಿಕರವಾಗಿತ್ತು. ರೋಗದ ಚಿಕಿತ್ಸೆ ದುಬಾರಿ ಆಗುತ್ತಿರಲಿಲ್ಲ. ಅನಗತ್ಯ ಪರೀಕ್ಷೆಗಳ ಅಗತ್ಯವೂ ಇರಲಿಲ್ಲ, ವೈದ್ಯನ ಮೇಲಿನ ಅಪರಿಮಿತ ವಿಶ್ವಾಸ, ನಂಬಿಕೆ ಮತ್ತು ಗೌರವ, ರೋಗ ಬೇಗ ಗುಣಮುಖವಾಗುವಲ್ಲಿ ಸಹಕಾರಿಯಾಗುತ್ತಿತ್ತು.
ಕುಟುಂಬ ವೈದ್ಯರು ಯಾಕೆ ಬೇಕು?
ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಕುಟುಂಬ ವೈದ್ಯರು ಬಹು ಮುಖ್ಯ ಭೂಮಿಕೆ ವಹಿಸುತ್ತಾರೆ. ಪ್ರತಿ ಒಂದು ಸಾವಿರ ಜನರಿಗೆ ಕನಿಷ್ಠ ೧೦ರಿಂದ ೧೫ ಮಂದಿ ಕುಟುಂಬ ವೈದ್ಯರು ಇರಲೇಬೇಕು. ಕೆನಡಾ ದೇಶದಲ್ಲಿ ಈ ಅನುಪಾತ ಸರಾಸರಿ ೧೦:೧ ರಂತೆ ಇದೆ. ನಮ್ಮ ಭಾರತ ದೇಶದಲ್ಲಿ ಈಗ ಕುಟುಂಬ ವೈದ್ಯರ ಸಂಖ್ಯೆ ಬಹಳ ಕಡಿಮೆ ಇದೆ. ಪ್ರತಿ ಒಂದು ಸಾವಿರ ಮಂದಿಗೆ ಕೇವಲ ಒಂದು ಅಥವಾ ಎರಡು ಮಂದಿ ಮಾತ್ರ ಕುಟುಂಬ ವೈದ್ಯರು ಲಭ್ಯರಿದ್ದಾರೆ.
ಕುಟುಂಬ ವೈದ್ಯರ ಬದಲಾಗಿ ನಕಲಿ ವೈದ್ಯರೂ ಇದ್ದಾರೆ. ಆದರೆ ಬೇರೆ ದೇಶಗಳ ಜೊತೆಗೆ ತುಲನೆ ಮಾಡಿದ್ದಲ್ಲಿ, ನಮ್ಮಲ್ಲಿ ತಜ್ಞ ವೈದ್ಯರ ಸಂಖ್ಯೆ ತುಲನಾತ್ಮಕವಾಗಿ ಒಟ್ಟು ವೈದ್ಯರ ಸಂಖ್ಯೆ ಜೊತೆಗೆ ಮಾಡಿದ್ದಲ್ಲಿ, ಸ್ವಲ್ಪ ಜಾಸ್ತಿಯೇ ಇದೆ. ಈ ವಿಷಮ ಅನುಪಾತ ಅವೈಜ್ಞಾನಿಕವೂ ಅತಾರ್ಕಿಕವೂ ಆಗಿರುತ್ತದೆ. ನಮ್ಮಲ್ಲಿ ಯುವ ವೈದ್ಯರು ಕುಟುಂಬ ವೈದ್ಯರಾಗಲು ಮನಸ್ಸು ಮಾಡುತ್ತಿಲ್ಲ, ಇದು ವೈದ್ಯರ ತಪ್ಪಲ್ಲ, ಸಮಾಜ ಕುಟುಂಬವೈದ್ಯರನ್ನು ನೋಡುವ ದೃಷ್ಟಿಕೋನ ಬದಲಾಯಿಸದಿದ್ದಲ್ಲಿ, ಈ ಕುಟುಂಬ ವೈದ್ಯರ ಸಂಖ್ಯೆ ಮತ್ತಷ್ಟು ಇಳಿಮುಖವಾಗುವ ಸಾಧ್ಯತೆ ಹೆಚ್ಚಾಗಿದೆ. ಕುಟುಂಬ ವೈದ್ಯರು ಒಂದು ಸಮಾಜದ ಅವಿಭಾಜ್ಯ ಅಂಗ.
ಯಾವ ದೇಶಗಳಲ್ಲಿ ಪರಿಣಾಮಕಾರಿ ಕುಟುಂಬ ವೈದ್ಯ ಪದ್ಧತಿ ಜಾರಿಯಲ್ಲಿದೆಯೋ, ಆ ದೇಶಗಳ ಆರೋಗ್ಯ ಸೂಚ್ಯಂಕಗಳು ಉನ್ನತ ಶ್ರೇಣ ಯಲ್ಲಿದೆ. ಉದಾಹರಣೆಗೆ ಇಂಗ್ಲೆAಡ್‌ನ ರಾಷ್ಟ್ರೀಯ ಆರೋಗ್ಯ ಸೇವೆ (ಓಊS) ನಿಯಮಾವಳಿ ಪ್ರಕಾರ, ಅನಿವಾರ್ಯ ತುರ್ತು ಪರಿಸ್ಥಿತಿಗಳನ್ನು ಹೊರತುಪಡಿಸಿ, ರೋಗಿ ಕುಟುಂಬವು ಕುಟುಂಬ ವೈದ್ಯರ ಶಿಫಾರಸ್ಸು ಇಲ್ಲದೆ ತಜ್ಞ ವೈದ್ಯರನ್ನು ಭೇಟಿಯಾಗಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಕುಟುಂಬ ವೈದ್ಯ ಪದ್ಧತಿ ಅಲ್ಲಿ ಮನ್ನಣೆ ಪಡೆದಿದೆ. ಅದೇ ರೀತಿ ನಮ್ಮ ನೆರೆ ರಾಷ್ಟç ಥಾಯ್ಲೆಂಡ್‌ನಲ್ಲಿ ವೈದ್ಯರ ಸಂಖ್ಯೆ ನಮ್ಮ ಭಾರತ ದೇಶಕ್ಕಿಂತ ಬಹಳ ಕಡಿಮೆ ಇದ್ದರೂ, ಕುಟುಂಬ ವೈದ್ಯ ಪದ್ಧತಿಗೆ ಜನರು ಹೆಚ್ಚು ಒತ್ತು ನೀಡಿದ ಕಾರಣದಿಂದ ಆರೋಗ್ಯ ಸೂಚ್ಯಂಕದಲ್ಲಿ ಥಾಯ್ಲೆಂಡ್ ಭಾರತಕ್ಕಿಂತ ಬಹಳ ಮುಂದೆ ಇದೆ.
ಈ ಎಲ್ಲ ಹಿನ್ನೆಲೆಯಲ್ಲಿ ಕುಟುಂಬ ವೈದ್ಯ ಪದ್ಧತಿಗೆ ಹೆಚ್ಚು ಒತ್ತು ನೀಡಬೇಕಾದ ಅನಿವರ‍್ಯತೆ ಇರುತ್ತದೆ. ಒಬ್ಬ ಮೂಳೆ ತಜ್ಞ ಎಲುಬು ಪರೀಕ್ಷಿಸುತ್ತಾನೆ. ಒಬ್ಬ ಹೃದಯತಜ್ಞ ಹೃದಯ ಪರೀಕ್ಷಿಸುತ್ತಾನೆ. ಕಣ ್ಣನ ತಜ್ಞ ಕಣ್ಣನ್ನು ಪರೀಕ್ಷಿಸುತ್ತಾನೆ. ಆದರೆ ಒಬ್ಬ ಕುಟುಂಬ ವೈದ್ಯ ರೋಗಿಯನ್ನು ಪರಿಪೂರ್ಣವಾಗಿ ಪರೀಕ್ಷಿಸುತ್ತಾನೆ. ಆತ ರೋಗಿಯ ಅಂಗಾAಗಗಳನ್ನೆಲ್ಲಾ ಬೇರೆಬೇರೆಯಾಗಿ ವಿಂಗಡಿಸಿ ನೋಡುವುದೇ ಇಲ್ಲ. ಇದು ಒಂದು ರೀತಿಯ ಏಕಗವಾಕ್ಷಿ ಪದ್ಧತಿ ರೀತಿಯಲ್ಲಿ ನಡೆಯುತ್ತದೆ.
ಇಲ್ಲಿ ರೋಗಿಯ ಸಂಪೂರ್ಣ ಪರೀಕ್ಷೆ ಒಬ್ಬನೇ ಮಾಡಿ ಅಗತ್ಯವಿದ್ದಲ್ಲಿ ವಿವಿಧ ಪರೀಕ್ಷೆಗಳನ್ನು ಮಾಡಿಸಿ, ರೋಗದ ಅಧ್ಯಯನ ಮಾಡಿ, ಸಮಗ್ರವಾದ ಚಿಂತನೆ ಮಾಡಿ, ರೋಗ ನಿರ್ಣಯ ಆತನೇ ಮಾಡುತ್ತಾನೆ. ಇದೊಂದು ಹೊಲಿಸ್ಟಿಕ್ ಅಪ್ರೋಚ್ ಅಥವಾ ಪರಿಪೂರ್ಣವಾದ ವಿಧಾನವಾಗಿರುತ್ತದೆ. ಈ ರೀತಿ ಮಾಡುವುದರಿಂದ ರೋಗಿಯ ಸಮಯ, ಹಣ ಮತ್ತು ಶ್ರಮದ ಉಳಿತಾಯವಾಗುತ್ತದೆ. ಅನಗತ್ಯವಾದ ಪರೀಕ್ಷೆ ಅಥವಾ ಯಾವುದೇ ಅತ್ಯಾಧುನಿಕ ಪರೀಕ್ಷೆಗಳ ಕಾಟವೂ ತಪ್ಪುತ್ತದೆ. ಹಾಗಂದ ಮಾತ್ರಕ್ಕೆ ಆತನಿಗೆ ಸಂಶಯವಿದ್ದಲ್ಲಿ, ಪರೀಕ್ಷೆ ಮಾಡಿಸಲು ಅಥವಾ ತಜ್ಞ ವೈದ್ಯರ ಬಳಿ ಕಳುಹಿಸಲು ಹಿಂದೇಟು ಹಾಕುವುದಿಲ್ಲ. ಅನಿವರ‍್ಯವಿದ್ದಲ್ಲಿ ಅಥವಾ ತಕ್ಷಣವೇ ತುರ್ತು ಚಿಕಿತ್ಸೆ ಅಗತ್ಯವಿದ್ದಲ್ಲಿ ಉನ್ನತ ಸ್ತರದ ತಜ್ಞ ವೈದ್ಯರ ಬಳಿ ಅವರೇ ಕಳುಹಿಸಿಕೊಡುತ್ತಾರೆ.
ಅಗತ್ಯವಿದ್ದಲ್ಲಿ ರೋಗಿಯ ಜೊತೆ ಅವರೂ ಬರುತ್ತಾರೆ. ಇದು ಕುಟುಂಬ ವೈದ್ಯ ಪದ್ಧತಿಯ ಅತ್ಯಂತ ಸೋಜಿಗದ ಮತ್ತು ವೈದ್ಯವೃತ್ತಿಯ ರಾಜಧರ್ಮದ ಅಭಿವ್ಯಕಿಯಾಗಿರುತ್ತದೆ, ಇಲ್ಲಿ ರೋಗಿಯ ಕೌಟುಂಬಿಕ ಹಿನ್ನಲೆ, ಆರ್ಥಿಕ ಪರಿಸ್ಥಿತಿ, ರೋಗಿಯ ರೋಗದ ಚರಿತ್ರೆ, ವೈದ್ಯರ ಆತ್ಮೀಯತೆ, ರೋಗಿಗೆ ಕುಟುಂಬ ವೈದ್ಯರ ಮೇಲಿರುವ ನಂಬಿಕೆ, ಭರವಸೆ ಎಲ್ಲವೂ ಪೂರಕ ಅಂಶಗಳಾಗಿ ಹೋಗಿ ಬೇಗನೆ ಗುಣವಾಗಲು ಧನಾತ್ಮಕವಾಗಿ ಸ್ಪಂದಿಸುತ್ತಾರೆ. ಯಾವಾಗ, ಎಲ್ಲಿಗೆ, ಯಾವ ತಜ್ಞರ ಬಳಿ ರೋಗಿಯನ್ನು ಕಳುಹಿಸಬೇಕು ಎಂಬುದರ ವೈದ್ಧಾಂತಿಕ ಜ್ಞಾನ ಮತ್ತು ಅನುಭವ ಕುಟುಂಬ ವೈದ್ಯರಿಗೆ ಹೆಚ್ಚು ತಿಳಿದಿರುವುದರಿಂದ ರೋಗಿಗಳಿಗೆ ಅನಗತ್ಯವಾಗಿ ಒಬ್ಬ ತಜ್ಞವೈದ್ಯರಿಂದ ಇನ್ನೊಬ್ಬ ತಜ್ಞವೈದ್ಯರ ಬಳಿ ಎಡತಾಕುವುದು ತಪ್ಪುತ್ತದೆ. ಇದರಿಂದಾಗಿ ಎಲ್ಲರೂ ತಜ್ಞವೈದ್ಯರ ಬಳಿ ಹೋಗುವುದು ತಪ್ಪಿ, ಜನರ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ. ಮತ್ತು ಅಗತ್ಯವಿರುವ ರೋಗಿಗಳಿಗೆ ತಜ್ಞವೈದ್ಯರು ಬೇಗನೇ ಸಿಗುವಂತಾಗುತ್ತದೆ.
ಕುಟುಂಬ ವೈದ್ಯರ ಅವಸಾನಕ್ಕೆ ಕಾರಣಗಳು ಏನು?
ವೈದ್ಯಕೀಯ ಶಿಕ್ಷಣ ಇಂದು ಕೇವಲ ಶಿಕ್ಷಣವಾಗಿ ಉಳಿದಿಲ್ಲ, ಅದೊಂದು ಬಹುದೊಡ್ಡ ವ್ಯಾಪಾರದ ಸರಕು ಆಗಿದೆ. ಅತೀ ಹೆಚ್ಚು ಹಣಕ್ಕೆ ಬಿಕರಿಯಾಗುವ ಅಥವಾ ಮಾರಾಟವಾಗುವ ವೈದ್ಯಕೀಯ ಸೀಟು ಇಂದು ದೊಡ್ಡ ಮಾಫಿಯವಾಗಿ ಬೆಳೆದಿದೆ. ಒಬ್ಬ ವಿದ್ಯಾರ್ಥಿ ವೈದ್ಯಕೀಯ ಶಿಕ್ಷಣಕ್ಕೆ ಸೇರಲು ಕೊಡಬೇಕಾದ ಕ್ಯಾಪಿಟೋಕನ್ ಶುಲ್ಕ ಒಂದು ಕೋಟಿಗಿಂತಲೂ ಜಾಸ್ತಿ ಇದೆ. ಇಷ್ಟು ಖರ್ಚು ಮಾಡಿದ ಬಳಿಕ ಯಾರೂ ಕುಟುಂಬ ವೈದ್ಯರಾಗಿ ಹಳ್ಳಿಗಳಲ್ಲಿ ಅಥವಾ ನಗರಗಳಲ್ಲಿ ಸೇವೆ ಮಾಡಲು ತಯಾರಿರುವುದೇ ಇಲ್ಲ.
ತಜ್ಞ ವೈದ್ಯರಿಗೆ ನೀಡುವ ಗೌರವ ಮತ್ತು ಪ್ರಾಮುಖ್ಯತೆಯನ್ನು ಜನರು ಮತ್ತು ಸಮಾಜ, ಕುಟುಂಬ ವೈದ್ಯರಿಗೆ ನೀಡುವುದಿಲ್ಲ. ಈ ಕಾರಣದಿಂದ ಯುವ ವೈದ್ಯರು ಕುಟುಂಬ ವೈದ್ಯರಾಗಲು ಮನಸ್ಸು ಮಾಡುವುದಿಲ್ಲ.
ತಜ್ಞ ವೈದ್ಯರಾಗಿ ಹೆಚ್ಚು ಆರ್ಥಿಕವಾಗಿ ದುಡಿಯಲು ಸಾಧ್ಯವಿರುವ ಕಾರಣ ಕೇವಲ ಕುಟುಂಬ ವೈದ್ಯರಾಗಿ, ಉಳಿಯಲು ಯಾರೂ ಒಪ್ಪುವುದಿಲ್ಲ.
ತಜ್ಞ ವೈದ್ಯರಿಗೆ ಸಿಗುವ ರಾಜಮರ್ಯಾದೆ, ಮನ್ನಣೆ ಕುಟುಂಬ ವೈದ್ಯರಿಗೆ ಸಮಾಜ ನೀಡುವುದಿಲ್ಲ. ಹೆಚ್ಚಿನ ಎಲ್ಲಾ ಕಡೆಗಳಲ್ಲಿ ಕುಟುಂಬ ವೈದ್ಯರು ಸಮಾಜದಿಂದ ತೀರಾ ಅವಗಣನೆಗೆ ಒಳಗಾಗಿದ್ದಾರೆ. ಕುಟುಂಬ ವೈದ್ಯರು ಎಂದರೆ ಏನೋ ಅಸಡ್ಡೆ ಮತ್ತು ತಾತ್ಸಾರ ಭಾವದಿಂದ ನೋಡುವ ಜನರು ನಮ್ಮ ನಡುವೆ ಬಹಳ ಮಂದಿ ಇದ್ದಾರೆ. ಹೂಸಿದ್ದಕ್ಕೆ, ಕೆಮ್ಮಿದ್ದಕ್ಕೆ ತಜ್ಞ ವೈದ್ಯರ ಬಳಿ ಎಡತಾಕುವುದು ಜನರಿಗೆ ಪ್ರತಿಷ್ಠೆಯಾಗಿದೆ. ಸಮಾಜದಿಂದ ನಿರ್ಲಕ್ಷತೆಗೆ ಒಳಗಾದ ಕುಟುಂಬ ವೈದ್ಯರು, ತಮ್ಮ ವೃತ್ತಿ ಘನತೆ ಮತ್ತು ಆತ್ಮಗೌರವ ಕಾಪಾಡಿಕೊಳ್ಳುವುದು ಸವಾಲಾಗಿದೆ ಮತ್ತು ಹೆಚ್ಚಿನ ಕುಟುಂಬ ವೈದ್ಯರು ಕೀಳರಿಮೆಗೆ ತುತ್ತಾಗುತ್ತಿದ್ದಾರೆ.
ಇದರ ಜೊತೆಗೆ ಆರ್ಥಿಕವಾಗಿಯೂ ಒಂದು ಪೂರ್ಣಕಾಲಿಕ ವೃತ್ತಿಯಾಗಿ ಕುಟುಂಬ ವೈದ್ಯರು ಬದುಕುವುದು ಇಂದಿನ ಕಾಲಘಟ್ಟದಲ್ಲಿ ಆಕರ್ಷಕವಾಗಿ ಉಳಿದಿಲ್ಲ. ತಜ್ಞ ವೈದ್ಯರ ಬಳಿ ಹೋಗಿ ಸಾವಿರಾರು ರೂಪಾಯಿ ಕೊಟ್ಟು ಬೀಗುವ ಜನರು, ಕುಟುಂಬ ವೈದ್ಯರಿಗೆ ನೂರು ರೂಪಾಯಿ ಸಂದರ್ಶನ ವೆಚ್ಚ ಕೊಡಲು ಹಿಂದೆ ಮುಂದೆ ನೋಡುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಸಾಲ ಕೇಳುವ ರೋಗಿಗಳೂ ಇದ್ದಾರೆ.
ಕುಟುಂಬ ವೈದ್ಯರ ಬಳಿ ಉಚಿತವಾಗಿ ಪರೀಕ್ಷೆ ಮಾಡಿಸಿ, ಉಚಿತ ಸಲಹೆ ಪಡೆದು, ಉಡಾಫೆಯಿಂದ ವರ್ತಿಸಿ, ಎದ್ದು ಹೋಗುವ ರೋಗಿಗಳು ನಮ್ಮ ನಡುವೆ ಇದ್ದಾರೆ. ಅತ್ತ ಸಮಾಜದಿಂದ ಇತ್ತ ಸರಕಾರದಿಂದಲೂ ಯಾವುದೇ ಸಹಕಾರ ಸಿಗದ ಹಿನ್ನಲೆಯಲ್ಲಿ ಕುಟುಂಬ ವೈದ್ಯರು ಹೈರಾಣಾಗಿ ಹೋಗಿ ಗೊಂದಲಕ್ಕೆ ತುತ್ತಾಗುತ್ತಿದ್ದಾರೆ. ಇದರ ಜೊತೆಗೆ ನಕಲಿ ವೈದ್ಯರೂ ಪೈಪೋಟಿಗೆ ನಿಂತು ಕುಟುಂಬ ವೈದ್ಯರ ಜೀವನವನ್ನು ಮತ್ತಷ್ಟು ಕಠಿಣವಾಗಿಸುತಿದ್ದಾರೆ. ಕುಟುಂಬ ವೈದ್ಯರಿಗೆ ಸರಕಾರ ಹತ್ತು ಹಲವು ನಿಯಮ ಜಾರಿ ಮಾಡಿ ಅವರನ್ನು ಹೈರಾಣಾಗಿಸಿದೆ. ಆದರೆ, ನಕಲಿ ವೈದ್ಯರಿಗೆ ಯಾವುದೇ ನಿಯಮಾವಳಿ ಇಲ್ಲದೆ ರಾಜಾರೋಷವಾಗಿ ವಿಜೃಂಭಿಸುತ್ತಿದ್ದಾರೆ.
ಈ ಎಲ್ಲಾ ಕಾರಣಗಳಿಂದ ಯಾವ ವೈದ್ಯ ಪದವೀಧರೂ ಕುಟುಂಬ ವೈದ್ಯಪದ್ಧತಿಯಿಂದ ವಿಮುಖರಾಗುತ್ತಿದ್ದಾರೆ. ಹೊಸ ವೈದ್ಯರು ಕುಟುಂಬ ವೈದ್ಯರಾಗಲು ಹಿಂದೇಟು ಹಾಕುತ್ತಿದ್ದಾರೆ. ಭಾರತದ ಜೀವಾಳವಾಗಿರುವ ಕುಟುಂಬ ವೈದ್ಯ ಪದ್ಧತಿ ಈಗ ನಿಧಾನವಾಗಿ ಅವಸಾನದ ಅಂಚಿಗೆ ಸರಿಯುತ್ತಿದೆ. ಇದರ ನೇರ ಪರಿಣಾಮ ಸಮಾಜದ ಮೇಲೆ ಆಗುತ್ತಿದೆ. ಕುಟುಂಬ ವೈದ್ಯರ ಕೊರತೆಯಿಂದ ಸಣ್ಣ ಪುಟ್ಟ ಕಾಯಿಲೆಗಳಿಗೆ ಜನರು ತಜ್ಞವೈದ್ಯರ ಬಳಿಗೆ ಹೋಗುವಂತಾಗಿ ಅವರ ಮೇಲೆ ವಿಪರೀತ ಒತ್ತಡ ಉಂಟಾಗಿದೆ. ಜೊತೆಗೆ ಚಿಕಿತ್ಸಾ ವೆಚ್ಚಗಳೂ ಮಿತಿ ಮೀರಿದೆ. ತಜ್ಞವೈದ್ಯರು ಹೆಚ್ಚಿನ ಪರೀಕ್ಷೆ ಮಾಡಿಸಿದರೆ ವೈದ್ಯರ ಮೇಲೆ ಅಸಹನೆ ಮತ್ತು ಅನುಮಾನದಿಂದ ನೋಡುವ ಕಾಲಘಟ್ಟಕ್ಕೆ ತಲುಪಿದ್ದೇವೆ.
ಒಂದೇ ಕಾಯಿಲೆಗೆ ಮೂರು ನಾಲ್ಕು ವೈದ್ಯರ ಬಳಿ ಹೋಗಿ ಸಲಹೆ ಕೇಳುವ ಸ್ಥಿತಿಗೆ ಬಂದು ನಿಂತಿದ್ದೇವೆ. ಹಣವಂತ ರೋಗಿಗಳು ಹೇಗಾದರೂ ವ್ಯವಸ್ಥೆ ಮಾಡಿ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಆದರೆ ಬಡಜನರು ಅತ್ತ ತಜ್ಞವೈದ್ಯರ ಬಳಿ ಹೋಗಲೂ ಸಾಧ್ಯವಾಗದೆ, ಇತ್ತ ಕುಟುಂಬ ವೈದ್ಯರೂ ಸಿಗದೆ, ನಕಲಿ ವೈದ್ಯರ ಬಳಿ ಹೋಗಿ ಜೀವ, ಹಣ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ಸರಕಾರದ ದಿವ್ಯ ನಿರ್ಲಕ್ಷö್ಯದಿಂದಾಗಿ ಸ್ಥಾಪಿತ ಹಿತಾಸಕ್ತಿಗಳು ವಿಜೃಂಭಿಸುತ್ತಿವೆ ಮತ್ತು ವೈದ್ಯಕೀಯ ಕ್ಷೇತ್ರಕ್ಕೂ, ಕಾರ್ಪೊರೇಟ್ ಸಂಸ್ಕೃತಿ ಬಂದು ವಕ್ಕರಿಸಿದೆ. ಈ ಹಿನ್ನೆಲೆಯಲ್ಲಿ ಸಮಾಜ, ಜನರು ಮತ್ತು ಸರಕಾರ ತಕ್ಷಣವೇ ಎಚ್ಚೆತ್ತುಗೊಂಡು ಕುಟುಂಬ ವೈದ್ಯ ಪದ್ಧತಿ ನಶಿಸಿ ಹೋಗದಂತೆ ಪೂರಕವಾದ ಕಾನೂನು ಮಾಡಿ, ಮತ್ತೆ ಸೂಕ್ತ ಪೂರಕ ವಾತಾವರಣ ಅದಷ್ಟು ಬೇಗ ಕಲ್ಪಿಸಬೇಕಾಗಿದೆ.
ಕೊನೆ ಮಾತು:
ಕುಟುಂಬ ವೈದ್ಯ ಪದ್ಧತಿ ನಮ್ಮ ಭಾರತೀಯ ಸಂಸ್ಕೃತಿಯ ಮತ್ತು ಸನಾತನ ಪರಂಪರೆಯ ಜೀವನಾಡಿ. ಒಂದು ಸಮಾಜದ ಸ್ವಾಸ್ಥö್ಯವನ್ನು ಕಾಪಾಡಲು ಕುಟುಂಬ ವೈದ್ಯ ಪದ್ಧತಿ ಅತೀ ಅಗತ್ಯ ಮತ್ತು ಅನಿವರ‍್ಯ. ನಮ್ಮ ಭಾರತೀಯ ವೈದ್ಯ ಪದ್ಧತಿಯಲ್ಲಿ ನಂಬಿಕೆಗೆ ವಿಶೇಷ ಸ್ಥಾನವಿದೆ ಮತ್ತು ವೈದ್ಯರನ್ನು ದೇವರಂತೆ ಕಾಣುವ ವರ್ಗ ಇನ್ನೂ ಇದೆ. ಈ ಕಾರಣಕ್ಕೆ ಮಗದೊಮ್ಮೆ ಕುಟುಂಬ ವೈದ್ಯ ಪದ್ಧತಿಯನ್ನು ಮರುಸ್ಥಾಪಿಸುವುದು ನಮ್ಮೆಲ್ಲರ ಆದ್ಯತೆಯಾಗಿರುತ್ತದೆ.

