ಹೆಜಮಾಡಿ : ನ. 1ರಂದು ‘ಸ್ವರ್ಣ ಸೇವಾ ಪಯಣ–15’ ಕಾರ್ಯಕ್ರಮ

0
15

ಹೆಜಮಾಡಿ : ವಿಶ್ವಾಸದ ಬುನಾದಿಯಲ್ಲಿ, ಸಹಕಾರದ ಹೆಜ್ಜೆಗಳಲ್ಲಿ ಹಾಗೂ ಸೇವೆಯ ಸಾರ್ಥಕತೆಯೊಂದಿಗೆ ಮುನ್ನಡೆಯುತ್ತಿರುವ ಸ್ವರ್ಣ ಸೌಹಾರ್ದ ಸಹಕಾರಿ ಸಂಘ ನಿಯಮಿತವು ಸದಸ್ಯರು, ಗ್ರಾಹಕರು, ಸಿಬ್ಬಂದಿ, ನಿರ್ದೇಶಕ ಮಂಡಳಿ ಹಾಗೂ ಹಿತೈಷಿಗಳ ಅಮೂಲ್ಯ ಸಹಕಾರ ಮತ್ತು ನಿರಂತರ ಪ್ರೋತ್ಸಾಹದೊಂದಿಗೆ ಯಶಸ್ವಿಯಾಗಿ 15 ವರ್ಷಗಳನ್ನು ಪೂರೈಸಿದೆ.

ಈ ಸಾರ್ಥಕ ಸಾಧನೆಯ ಸ್ಮರಣಾರ್ಥ ‘ಸ್ವರ್ಣ ಸೇವಾ ಪಯಣ–15’ ಕಾರ್ಯಕ್ರಮವನ್ನು ನವೆಂಬರ್ 1ರಂದು ಭಾನುವಾರ ಅಪರಾಹ್ನ 3 ಗಂಟೆಗೆ ಹೆಜಮಾಡಿಯ ಬಿಲ್ಲವರ ಸಂಘದ ಜಯ ಸಿ. ಸುವರ್ಣ ಸಭಾಗೃಹದಲ್ಲಿ ಆಯೋಜಿಸಲಾಗಿದೆ.

ಸಂಘದ 15 ವರ್ಷಗಳ ಸೇವಾ ಪಯಣದ ನೆನಪುಗಳನ್ನು ಮೆಲುಕು ಹಾಕುವುದು, ಸಾಧನೆಯ ಮೈಲುಗಲ್ಲುಗಳನ್ನು ಸಂಭ್ರಮಿಸುವುದು ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುವ ಸಂಕಲ್ಪದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿವಿಧ ಸೇವಾ ಕ್ಷೇತ್ರಗಳಲ್ಲಿ ಸಾಧನೆಗೈದ 15 ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವರ್ಣ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷರಾದ ಶೇಖರ್ ಕೆ. ಕರ್ಕೇರ ವಹಿಸಲಿದ್ದಾರೆ.

ಬೆಂಗಳೂರು ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ಸಂಸ್ಥೆಯ ನಿರ್ದೇಶಕಿ ಭಾರತಿ ಭಟ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ಉಪನಿಬಂಧಕ ಜೆ. ಸುಧೀರ್ ಕುಮಾರ್, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಪಿ. ಜಗನ್ನಾಥ ಶೆಟ್ಟಿ, ಪ್ರತಿಭಾವಂತ ವಾಗ್ಮಿ ಹಾಗೂ ಚಿಂತನಶೀಲ ಭಾಷಣಕಾರ ಎನ್.ಆರ್. ದಾಮೋದರ ಶರ್ಮಾ, ಉಡುಪಿಯ ಶಿವ ಸಾಗರ್ ಗ್ರೂಪ್ ಆಫ್ ಹೋಟೆಲ್ಸ್‌ನ ಪ್ರಭಾಕರ ಎಸ್. ಪೂಜಾರಿ ಹಾಗೂ ಕಟಪಾಡಿಯ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಮಹೇಶ್ ಎನ್. ಅಂಚನ್ ಭಾಗವಹಿಸಲಿದ್ದಾರೆ.

ಯಕ್ಷಗಾನ ಮತ್ತು ಹಾಸ್ಯದ ಸಮ್ಮಿಲನದಲ್ಲಿ ‘ಯಕ್ಷ ತೆಲಿಕೆ’ ಕಾರ್ಯಕ್ರಮವು ಸಂಜೆ 6 ಗಂಟೆಯಿಂದ ನಡೆಯಲಿದೆ.

ಸಂಘದ 15 ವರ್ಷಗಳ ಸೇವೆ, ಸಾಧನೆ ಹಾಗೂ ಸಹಕಾರ ಕ್ಷೇತ್ರದಲ್ಲಿನ ಕೊಡುಗೆಯನ್ನು ಸ್ಮರಿಸುವ ಈ ಕಾರ್ಯಕ್ರಮದಲ್ಲಿ ಸದಸ್ಯರು, ಗ್ರಾಹಕರು, ಸಿಬ್ಬಂದಿ, ಹಿತೈಷಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮವನ್ನು ಅರ್ಥಪೂರ್ಣಗೊಳಿಸಬೇಕೆಂದು ಸಂಘದ ಅಧ್ಯಕ್ಷ ಶೇಖರ್ ಕೆ. ಕರ್ಕೇರ, ನಿರ್ದೇಶಕ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಆತ್ಮೀಯವಾಗಿ ಆಹ್ವಾನಿಸಿದ್ದಾರೆ.