ಹೆಜಮಾಡಿ: ಪಲಿಮಾರು ಮೊಗವೀರ ಸಭಾ. ಪಲಿಮಾರು ಹೆಜಮಾಡಿ- ಕೋಡಿ. ಶ್ರೀ ಸೀತಾರಾಮ ಭಜನಾ ಮಂದಿರದ ವತಿಯಿಂದ ಮೀನುಗಾರರ ಒಳಿತಿಗಾಗಿ ಹಾಗೂ ಸಮುದ್ರದಲ್ಲಿ ಮೀನುಗಾರರಿಗೆ ಯಾವುದೇ ರೀತಿಯ ತೊಂದರೆಗಳು ಎದುರಾಗದಂತೆ ಸಮುದ್ರ ಪೂಜೆ ಹಾಗೂ ವಿಶೇಷ ಪ್ರಾರ್ಥನಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.
ಪಲಿಮಾರು ಮೊಗವೀರ ಸಭಾದ ಶ್ರೀ ಸೀತಾರಾಮ ಭಜನಾ ಮಂದಿರದಲ್ಲಿ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಭಜನಾ ಮೆರವಣಿಗೆಯ ಮೂಲಕ ಸಮುದ್ರ ತೀರಕ್ಕೆ ತೆರಳಿ, ಸಮುದ್ರ ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಸಮುದ್ರ ಗಂಗಾಮಾತೆಗೆ ತೆಂಗಿನಕಾಯಿ, ಹೂವು,ದೇವರ ಪ್ರಸಾದ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ಅರ್ಪಿಸಿ, ಸಮುದ್ರಕ್ಕೆ ಹಾಲನ್ನು ಸಮರ್ಪಿಸಿ ಪೂಜೆ ನೆರವೇರಿಸಲಾಯಿತು. ಮೀನುಗಾರರಿಗೆ ಉತ್ತಮ ಮೀನುಗಾರಿಕೆ ದೊರೆಯಬೇಕು, ಸಮುದ್ರದಲ್ಲಿ ಯಾವುದೇ ಅವಾಘಡಗಳು ಎದುರಾಗದಿರಬೇಕು ಹಾಗೂ ಮೀನುಗಾರರ ಕುಟುಂಬಗಳಿಗೆ ಸುಖ, ಶಾಂತಿ ಮತ್ತು ಸಮೃದ್ಧಿ ದೊರೆಯಬೇಕು ಎಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಪಲಿಮಾರು ಮೊಗವೀರ ಸಭಾದ ಅಧ್ಯಕ್ಷರಾದ ಸುಧಾಕರ ಕರ್ಕೇರ, ಗೌರವಾಧ್ಯಕ್ಷರಾದ ಸದಾಶಿವ ಕೋಟ್ಯಾನ್, ಸೇವಾ ಸಮಿತಿ ಅಧ್ಯಕ್ಷರಾದ ವಿಜಯ್ ಎಸ್. ಬಂಗೇರ, ಮಹಿಳಾ ಮಂಡಳಿ ಉಪಾಧ್ಯಕ್ಷರಾದ ವಿಮಲಾ ಸುವರ್ಣ, ಮಾಜಿ ಅಧ್ಯಕ್ಷರಾದ ವಿನೋದ್ ಕೋಟ್ಯಾನ್, ಚಂದ್ರಶೇಖರ ಕರ್ಕೇರ, ಸುಧಾಕರ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸುನಿಲ್ ಪುತ್ರನ್ ಸೇರಿದಂತೆ ಪಲಿಮಾರು ಮೊಗವೀರ ಸಭಾದ ಪದಾಧಿಕಾರಿಗಳು ಮಹಿಳಾಮಂಡಳಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

