ಹುಲಿಕಲ್ ಘಾಟಿ ಬಳಿ ಗುಡ್ಡ ಕುಸಿತ : ಮೂವರು ಕಾರ್ಮಿಕರ ಜೀವಂತ ಸಮಾಧಿ

0
141

ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟಿಯಲ್ಲಿ ಸಂಜೆ ಸಂಭವಿಸಿದ ಗುಡ್ಡ ಕುಸಿತದಲ್ಲಿ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಹುಲಿಕಲ್ ಘಾಟಿಯ ಚಂಡಿಕಾಂಬಾ ದೇವಾಲಯದ ಸಮೀಪವಿರುವ ಹೇರ್ ಪಿನ್ ತಿರುವಿನಲ್ಲಿ ರಸ್ತೆ ಅಗಲೀಕರಣ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು.

ಸಂಜೆ ಸುಮಾರು 6:30ರ ವೇಳೆಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಏಕಾಏಕಿ ಗುಡ್ಡದ ಮಣ್ಣು ಕುಸಿದು ಬಿದ್ದಿದೆ. ಈ ವೇಳೆ ಕೆಲಸ ಮಾಡುತ್ತಿದ್ದ ಏಳು ಮಂದಿ ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದರು.

ರಾಘವೇಂದ್ರ (ರಾಘು) (37) ನಗರ ನಿವಾಸಿ ಹಾಗೂ ಕಾಮಗಾರಿ ಮೇಲ್ವಿಚಾರಕ,ರಾಜು (30) ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನೆಲಗಲ್ಲು ಗ್ರಾಮದ ಕಾರ್ಮಿಕ, ಶಬ್ಬೀರ್ (40) ಹಾವೇರಿ ಜಿಲ್ಲೆಯ ನೆಲಗಲ್ಲು ಗ್ರಾಮದ ಕಾರ್ಮಿಕ ಮೃತರು.

ಘಟನೆ ಸಂಭವಿಸಿದ ತಕ್ಷಣ ಸ್ಥಳೀಯರು, ನಗರ ಠಾಣೆಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಮಣ್ಣಿನಡಿ ಸಿಲುಕಿದ್ದ ನಾಲ್ವರು ಕಾರ್ಮಿಕರನ್ನು ರಕ್ಷಿಸಿ ಕೂಡಲೇ ಹೊಸನಗರ ಮತ್ತು ಉಡುಪಿಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಈ ಘಟನೆಯಿಂದಾಗಿ ಮಲೆನಾಡು ಮತ್ತು ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾದ ಹುಲಿಕಲ್ ಘಾಟಿಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಆಗುಂಬೆ ಘಾಟಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧವಿರುವುದರಿಂದ ಸಾವಿರಾರು ವಾಹನಗಳು ಈ ಮಾರ್ಗದಲ್ಲೇ ಸಂಚರಿಸುತ್ತವೆ. ಗುಡ್ಡ ಕುಸಿತದಿಂದಾಗಿ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ನಂತರ ವಾಹನಗಳನ್ನು ನಾಗೋಡಿ-ಕೊಲ್ಲೂರು ಮಾರ್ಗವಾಗಿ ಕರಾವಳಿ ಕಡೆಗೆ ಮರಳಿಸಲಾಯಿತು. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here