ದಾವಣಗೆರೆ : ಚಿತ್ರದುರ್ಗ ಜಿಲ್ಲೆಯ ಕುರುಬರಹಳ್ಳಿಯ ಹೊನ್ನಮ್ಮರವರು 85 ವರ್ಷಗಳ ಇಳಿ ವಯಸ್ಸಿನಲ್ಲಿ ಭಜನೆ, ಭಾವಗೀತೆ, ಭಕ್ತಿಗೀತೆ, ಜಾನಪದಗೀತೆಗಳನ್ನು ನಾಡಿನಾದ್ಯಂತ ಪ್ರಸ್ತುತ ಪಡಿಸಿ ಚಿತ್ರದುರ್ಗ, ಭದ್ರಾವತಿ ಆಕಾಶವಾಣಿಗಳಲ್ಲೂ ತಮ್ಮ ಪ್ರತಿಭೆಗಳನ್ನು ವ್ಯಕ್ತಪಡಿಸಿ, ಶರಣ ಸಂಸ್ಕೃತಿ ಉತ್ಸವ, ಸಿರಿಗೆರೆ ತರಳಬಾಳು ಹುಣ್ಣಿಮೆಯ ಸಮಾರಂಭಗಳಲ್ಲಿ ನಿರಂತರವಾಗಿ ಕಠಿಣ ಪರಿಶ್ರಮದಿಂದ ಸಂಸ್ಕೃತಿ ಸಂಸ್ಕಾರದೊಂದಿಗೆ ಹಾಡುಗಳನ್ನು ಹೇಳುತ್ತಾ ಭಜನೆ, ತತ್ವ ಪದಗಳನ್ನು ಸೃಷ್ಠಿ ಮಾಡಿ ವಿವಿಧ ವೇದಿಕೆಗಳಲ್ಲಿ ವೈಭವೀಕರಿಸಿದ ಇವರ ಸಾಧನೆಗಳನ್ನು ಗುರುತಿಸಿ ಸಾಲಿಗ್ರಾಮದ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಮತ್ತು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಕೊಡ ಮಾಡುವ “ಸರಸ್ವತಿ ಕನ್ನಡ ರತ್ನ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಗಳ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ ಶೆಣೈ ಅವರು ತಿಳಿಸಿದ್ದಾರೆ.
ದಾವಣಗೆರೆಯ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಏಪ್ರಿಲ್ 19 ರಂದು ಭಾನುವಾರ ಅದ್ದೂರಿಯಾಗಿ ಹೊನ್ನಮ್ಮರವರಿಗೆ ಕಲಾಕುಂಚದ ಮುತ್ತೆöÊದೆಯರು, ಕನ್ನಡ ತಿಲಕವಿಟ್ಟು ಕನ್ನಡ ಕಂಕಣ ಕಟ್ಟಿ ಕನ್ನಡ ಆರತಿ ಬೆಳಗಿ ವೇದಿಕೆಯಲ್ಲಿ ಪ್ರತ್ಯೇಕ ಸಿಂಹಾಸನದ ಮೇಲೆ ಕೂರಿಸಿ ಕನ್ನಡ ಪೇಟಾ ಹಾಕಿ, ಶಾಲು ಹಾಕಿ ಪುಷ್ಪವೃಷ್ಠಿಯೊಂದಿಗೆ ಅವರದೇ ಭಾವಚಿತ್ರವಿರುವ ಸನ್ಮಾನ ಪತ್ರ ಹಾಗೂ ಶೃಂಗೇರಿಯ ಶ್ರೀ ಶಾರದಾಮಾತೆಯ ಸ್ಮರಣಿಕೆ ಕೊಟ್ಟು ಗೌರವಿಸಿ ಸನ್ಮಾನಿಸಲಾಗುವುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಪ್ರಕಟಿಸಿದ್ದಾರೆ.

