ಉಡುಪಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆ ಸೇರಿದಂತೆ ಸಂಪೂರ್ಣ ಕರಾವಳಿ ಭಾಗಕ್ಕೆ ಜುಲೈ 2 ಮತ್ತು 3ರಂದು (ಬುಧವಾರ, ಗುರುವಾರ) ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ಘೋಷಿಸಿದೆ.
ಮುನ್ಸೂಚನೆ ಏನು?
ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಗುಡುಗು-ಮಿಂಚು, ಬಿರುಗಾಳಿ ಸಹಿತ ಅತಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಒಂದೆರಡು ಕಡೆಗಳಲ್ಲಿ 24 ಗಂಟೆಯಲ್ಲಿ 204.5 ಮಿ.ಮೀ ಗೂ ಅಧಿಕ ಮಳೆ ಆಗುವ ಮುನ್ಸೂಚನೆ ಇದೆ.
ಮೀನುಗಾರರಿಗೆ ಕಟ್ಟೆಚ್ಚರ:
ಕರಾವಳಿಯಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಮುದ್ರ ಪ್ರಕ್ಷುಬ್ಧಗೊಳ್ಳಲಿದೆ. ಅಲೆಗಳ ಅಬ್ಬರ ತೀವ್ರವಾಗಿರುವ ಕಾರಣ ಮೀನುಗಾರರು ಮುಂದಿನ 48 ಗಂಟೆಗಳ ಕಾಲ ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.
ಸಾರ್ವಜನಿಕರಿಗೆ ಸೂಚನೆ:
- ತಗ್ಗು ಪ್ರದೇಶ, ನದಿ ತೀರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಿ.
- ಗುಡ್ಡಗಾಡು ಪ್ರದೇಶದಲ್ಲಿ ಭೂಕುಸಿತ ಸಾಧ್ಯತೆ ಇರುವುದರಿಂದ ಸಂಚಾರಕ್ಕೆ ಎಚ್ಚರ.
- ಮರದ ಕೆಳಗೆ, ವಿದ್ಯುತ್ ಕಂಬಗಳ ಬಳಿ ನಿಲ್ಲಬೇಡಿ. ಗುಡುಗು-ಮಿಂಚಿನ ವೇಳೆ ಮನೆಯೊಳಗೇ ಇರಿ.
- ಅನಗತ್ಯ ಪ್ರಯಾಣ ಬೇಡ. ತುರ್ತು ಸೇವೆಗಳಿಗೆ ಮಾತ್ರ ಹೊರಬನ್ನಿ.
ವರದಿ ವಿನೋದ್ ಶೆಟ್ಟಿ ಉಡುಪಿ

