ಕರವೇ ಸ್ವಾಭಿಮಾನಿ ಬಣದಿಂದ ಕುಶಾಲನಗರ ಪುರಸಭೆಗೆ ಪ್ರಶ್ನೆ ಉತ್ತರಿಸಿ ಪುರಸಭೆಯ ಅಧಿಕಾರಿಗಳೇ
ಸುಮಾರು 7.5 ಕೋಟಿ ರೂಪಾಯಿಗಳ ಭಾರಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡು, ಕಳೆದ 2025ರ ಜೂನ್ 11 ರಂದು ಅತ್ಯಂತ ವೈಭವದಿಂದ ಲೋಕಾರ್ಪಣೆಗೊಂಡ ಇಲ್ಲಿನ ಪುರಸಭೆ ಕಚೇರಿ ಮತ್ತು ವಾಣಿಜ್ಯ ಸಂಕೀರ್ಣ ಕಟ್ಟಡದ ಆವರಣವು ಈಗ ಸಾರ್ವಜನಿಕರ ಪಾಲಿಗೆ ಅಪಾಯದ ಆಡುಕಳವಾಗಿ ಮಾರ್ಪಟ್ಟಿದೆ.
ಕಚೇರಿಗೆ ಹೋಗುವ ಮುಖ್ಯ ದ್ವಾರ ಹಾಗೂ ಪುರಸಭೆಯ ಅಧಿಕಾರಿಗಳ ಬೈಕುಗಳನ್ನು ನಿಲ್ಲಿಸುವ ಹಾದಿಯಲ್ಲೇ ಇರುವ ಮಳೆನೀರು ಹರಿಯುವ ದೊಡ್ಡ ಚರಂಡಿಯ ಕಬ್ಬಿಣದ ಸರಳುಗಳು ಸಂಪೂರ್ಣವಾಗಿ ಮುರಿದು ಬಿದ್ದಿದ್ದು, ಸಾರ್ವಜನಿಕರ ಪಾಲಿಗೆ ಪ್ರಾಣಸಂಕಟವಾಗಿ ಪರಿಣಮಿಸಿದೆ. ಪುರಸಭೆಯ ಈ ತೀವ್ರ ನಿರ್ಲಕ್ಷ್ಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಪುರಸಭೆಯ ಅಧಿಕಾರಿಗಳಿಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಭವ್ಯವಾದ ಪುರಸಭೆಯ ಹೊಸ ಕಟ್ಟಡ ಉದ್ಘಾಟನೆಯಾಗಿ ಕೇವಲ ಒಂದು ವರ್ಷ ಒಂದು ತಿಂಗಳು ಅಥವಾ ಎರಡು ತಿಂಗಳಷ್ಟೇ ಕಳೆದಿದೆ. ಇಷ್ಟು ಕಡಿಮೆ ಅವಧಿಯಲ್ಲೇ ಸುಂದರವಾದ ಇಂಟರ್‌ಲಾಕ್ ನೆಲಹಾಸಿನ ಮಧ್ಯದಲ್ಲೇ ಹಾದುಹೋಗಿರುವ ಈ ಚರಂಡಿಯ ಕಬ್ಬಿಣದ ಗ್ರೀಲ್ಸ್‌ಗಳು ಕಳಪೆ ಗುಣಮಟ್ಟದಿಂದಾಗಿ ಈಗಾಗಲೇ ಸಂಪೂರ್ಣವಾಗಿ ತುಕ್ಕು ಹಿಡಿದು, ತುಂಡು ತುಂಡಾಗಿ ಹೋಗಿವೆ. ಸದ್ಯ ಚರಂಡಿಯ ಮಧ್ಯಭಾಗದ ಸರಳುಗಳು ಸಂಪೂರ್ಣವಾಗಿ ಮಾಯವಾಗಿದ್ದು, ಕಣ್ಣೆದುರೇ ದೊಡ್ಡ ಕಂದಕ ನಿರ್ಮಾಣವಾಗಿದೆ.
“ಕೋಟಿಗಟ್ಟಲೆ ಸಾರ್ವಜನಿಕರ ತೆರಿಗೆ ಹಣ ಬಳಸಿ ನಿರ್ಮಿಸಿದ ಕಟ್ಟಡದ ಕಾಮಗಾರಿ ಕೇವಲ ಒಂದು ವರ್ಷದ ಅವಧಿಯಲ್ಲೇ ಹೀಗೆ ಮುರಿದು ಬಿದ್ದಿರುವುದು ಇಲ್ಲಿ ನಡೆದಿರುವ ಕಳಪೆ ಕಾಮಗಾರಿ ಹಾಗೂ ಭ್ರಷ್ಟಾಚಾರಕ್ಕೆ ಸ್ಪಷ್ಟ ಸಾಕ್ಷಿ” ಎಂದು ಕರವೇ ಸ್ವಾಭಿಮಾನಿ ಬಣ ಪದಾಧಿಕಾರಿಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಪುರಸಭೆಯ ಆವರಣದಲ್ಲೇ ಇರುವ ವ್ಯಾಪಾರ ಮಳಿಗೆಯಿಂದ ಬರುವ ಜನರಿಗೆ ತೀವ್ರ ತೊಂದರೆ
ಅತ್ಯಂತ ಆಶ್ಚರ್ಯದ ಸಂಗತಿಯೆಂದರೆ, ಸಾರ್ವಜನಿಕರ ಜೀವಕ್ಕೆ ಕಂಟಕವಾಗಿರುವ ಇಂತಹ ಯಮಸ್ವರೂಪಿ ಗುಂಡಿಯ ಪಕ್ಕದಲ್ಲೇ ಪುರಸಭೆಯ ಅಧಿಕಾರಿಗಳ ಬೈಕುಗಳು ಸಹ ಸಾಲಾಗಿ ನಿಲ್ಲುತ್ತಿವೆ.
ತಮ್ಮದೇ ವಾಹನಗಳ ಪಕ್ಕದಲ್ಲೇ ಇಷ್ಟು ದೊಡ್ಡ ಕಂದಕವಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಇವರ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ.
ಇನ್ನು ಪುರಸಭೆಯ ಆವರಣದ ಅಕ್ಕಪಕ್ಕದಲ್ಲಿ ಸಾಲು ಸಾಲು ವ್ಯಾಪಾರ ಮಳಿಗೆಗಳಿದ್ದು, ಅಲ್ಲಿಂದ ದಿನನಿತ್ಯ ನೂರಾರು ಸಾರ್ವಜನಿಕರು ವಿವಿಧ ಕೆಲಸ ಕಾರ್ಯಗಳಿಗಾಗಿ ಪುರಸಭೆಗೆ ಬರುತ್ತಾರೆ.
ಹೀಗೆ ಅಂಗಡಿ ಮಳಿಗೆಗಳ ಕಡೆಯಿಂದ ಜನರು ಪುರಸಭೆಗೆ ಬರುವಾಗ ಈ ತೆರೆದ ಚರಂಡಿಯ ಗುಂಡಿಯನ್ನು ದಾಟಿಕೊಂಡೇ ಬರಬೇಕಾಗಿದ್ದು, ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಆಯತಪ್ಪಿ ಬೀಳುವ ಭೀತಿ ಎದುರಾಗಿದೆ. ಪುರಸಭೆಯ ಅಧಿಕಾರಿಗಳ ಬೈಕುಗಳನ್ನು ತಿರುಗಿಸುವಾಗ ಸ್ವಲ್ಪ ಆಯತಪ್ಪಿದರೂ ವಾಹನ ಸಮೇತ ಆಳವಾದ ಚರಂಡಿಗೆ ಬೀಳುವ ಅಪಾಯ ದಟ್ಟವಾಗಿದೆ. ಇದರೊಂದಿಗೆ, ಆವರಣದೊಳಗೆ ಬರುವ ದನ-ಕರುಗಳು ಆಕಸ್ಮಿಕವಾಗಿ ಈ ಗುಂಡಿಗೆ ಬಿದ್ದರೆ ಪ್ರಾಣಾಪಾಯವಾಗುವುದು ಖಂಡಿತ.
ಅದ್ದೂರಿಯಾಗಿ ಉದ್ಘಾಟನೆಗೊಂಡು ಕೇವಲ ಒಂದೂವರೆ ವರ್ಷವೂ ತುಂಬದ ತಮ್ಮದೇ ಕಚೇರಿ ಆವರಣದಲ್ಲಿರುವ, ತಾವೇ ನಿತ್ಯ ಬೈಕ್ ನಿಲ್ಲಿಸುವ ಜಾಗದ ಪಕ್ಕದ ಗಂಭೀರ ಸಮಸ್ಯೆಯನ್ನು ಮುಚ್ಚಲು ಅಸಾಧ್ಯವಾಗಿರುವ ಅಧಿಕಾರಿಗಳು, ಇನ್ನು ಊರಿನ ಬೇರೆ ಕಡೆಯ ಸಾರ್ವಜನಿಕ ಸಮಸ್ಯೆಗಳನ್ನು ಹೇಗೆ ತಾನೇ ಸರಿಪಡಿಸಲು ಸಾಧ್ಯ?” ಎಂದು ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ನೇರ ಪ್ರಶ್ನೆ ಹಾಕಿದ್ದಾರೆ.
ಒಂದು ವೇಳೆ ಈ ಜಾಗದಲ್ಲಿ ಸಾರ್ವಜನಿಕರಿಗಾಗಲಿ ಅಥವಾ ಮೂಕ ಪ್ರಾಣಿಗಳಿಗಾಗಲಿ ಯಾವುದೇ ಅನಾಹುತ ಸಂಭವಿಸಿದರೆ, ಅದಕ್ಕೆ ಪುರಸಭೆಯ ಮುಖ್ಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿಯೇ ನೇರ ಜವಾಬ್ದಾರರಾಗುತ್ತಾರೆ ಎಂದು ಕರವೇ ಸ್ವಾಭಿಮಾನಿ ಬಣದಿಂದ ಎಚ್ಚರಿಸಿದೆ.
ಆದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಂಡು, ತಕ್ಷಣವೇ ಈ ಚರಂಡಿಗೆ ಗಟ್ಟಿಮುಟ್ಟಾದ ಕಬ್ಬಿಣದ ಸರಳುಗಳನ್ನು ಅಳವಡಿಸಿ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು.
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪುರಸಭೆ ಕಚೇರಿಗೆ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಪುರಸಭೆ ಮುಖ್ಯ ಅಧಿಕಾರಿಯವರಿಗೆ ಹಾಗೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಮತ್ತು ಕರವೇ ಸ್ವಾಭಿಮಾನಿ ಬಣದ ಜಿಲ್ಲಾ ಉಪಾಧ್ಯಕ್ಷರಾದ ರಾಜಶೇಖರ್ ಗೌಡ ಮತ್ತು ಕರವೇ ಸ್ವಾಭಿಮಾನಿ ಬಣದ ಗೌರವಾಧ್ಯಕ್ಷರಾದ ಚಂದ್ರು ಹಾಗೂ ಕರವೇ ಸ್ವಾಭಿಮಾನಿ ಬಣದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಜಯಶ್ರೀ ಮುರುಗೇಶ್ ಮತ್ತು ಕುಶಾಲನಗರ ಕುಶಾಲನಗರ ತಾಲೂಕು ಸಂಚಾಲಕರಾದ ವಿಪಿ ಚಂದ್ರಣ್ಣ ಮತ್ತು ಕರವೇ ಸ್ವಾಭಿಮಾನಿ ಬಣದ ಸುಂಟಿಕೊಪ್ಪ ಹೋಬಳಿ ಅಧ್ಯಕ್ಷರಾದ ಭವ್ಯ ಮತ್ತು ಜಿಲ್ಲಾ ಸಂಚಲಕರಾದ ಸತೀಶ್ ಮತ್ತು ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳಾದ ವಿಲ್ಸನ್ ಮತ್ತು ನಂಜಪ್ಪ ಮತ್ತು ರಮೇಶ್ ಉಪಸ್ಥಿತರಿದ್ದರು.

