ಯಕ್ಷಗಾನ ಕಲಾರಂಗವು ಸಾಧಕ ಹಿರಿಯ ಅರ್ಥಧಾರಿಗಳಿಗೆ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರದಾನ ಸಮಾರಂಭವು ಸಂಸ್ಥೆಯ ಐವೈಸಿ ಸಭಾ ಭವನದಲ್ಲಿ ಇಂದು (11/07/26) ಜರುಗಿತು. ಈ ವರ್ಷ ಹೊಸದಾಗಿ ಸೇರಿಕೊಂಡ ಡಿ. ಬಿ. ವೆಂಕಟಸುಬ್ಬಾ ಜೋಯಿಸ್ ಹಾಗು ಮಟ್ಟಿ ಮುರಳೀಧರ ರಾವ್, ಪಂಡಿತ ಪೆರ್ಲ ಕೃಷ್ಣ ಭಟ್ ನೆನಪಿನಲ್ಲಿ ರೂ.20000 ನಗದನ್ನೊಳಗೊಂಡ ಪ್ರಶಸ್ತಿಗಳನ್ನು ಅನುಕ್ರಮವಾಗಿ ವೆಂಕಟರಾಮ ಭಟ್ಟ, ಸುಳ್ಯ, ಡಾ. ಜಿ. ಕೆ. ಹೆಗಡೆ, ಹೊನ್ನಾವರ, ಕೋಟೆ ರಾಮ ಭಟ್, ಕಾರ್ಕಳ ಇವರುಗಳಿಗೆ ಪ್ರದಾನ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾನವ ಹಕ್ಕುಗಳ ಆಯೋಗ, ಬೆಂಗಳೂರು ಇದರ ಸದಸ್ಯರಾದ ಡಾ.ಟಿ.ಶ್ಯಾಮ ಭಟ್ ಮಾತನಾಡಿ ಯಕ್ಷಗಾನ ಕಲಾರಂಗ ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಅಗಾಧವಾದ ಕೆಲಸ ಮಾಡುತ್ತಿದೆ. ಸಮರ್ಥ ನಾಯಕತ್ವ, ನಿಸ್ಪೃಹ ಕಾರ್ಯಕರ್ತರ ಪಡೆ ಎಂತಹ ಅದ್ಭುತ ಸಾಧಿಸಬಹುದು ಎಂಬುದಕ್ಕೆ ಈ ಸಂಸ್ಥೆ ಉತ್ಕೃಷ್ಟ ಉದಾಹರಣೆಯಾಗಿದೆ ಎಂದು ಹೇಳಿ ತನ್ನ ನೆಚ್ಚಿನ ಕಲಾವಿದರುಗಳಾದ ಶೇಣಿ ಗೋಪಾಲಕೃಷ್ಣ ಭಟ್ ಮತ್ತು ಕೆ. ಗೋವಿಂದ ಭಟ್ ಇವರ ನೆನಪಿನಲ್ಲಿ ಎರಡು ಪ್ರಶಸ್ತಿ ಸ್ಥಾಪಿಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಶುಭಾಶಂಸನೆ ಗೈದ ಹಿರಿಯ ವಿದ್ವಾಂಸ ಡಾ. ತಾಳ್ತಜೆ ವಸಂತಕುಮಾರ ಯಕ್ಷಗಾನ ಲಾಗಾಯ್ತಿನಿಂದಲೂ ನಮ್ಮ ಪುರಾಣ ಕಥೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುತ್ತಾ ಬಂದಿದೆ. ತಾಳಮದ್ದಲೆ ಮಾಧ್ಯಮ ಆಶುವೈಭವದ ಅತ್ಯುತ್ತಮ ಕಲಾಪ್ರಕಾರ. ಇಂದು ಪ್ರಶಸ್ತಿ ಸ್ವೀಕರಿಸಿದ ಮೂವರು ಹಿರಿಯ ಅರ್ಥಧಾರಿಗಳೂ ನನಗೆ ಪರಿಚಿತರೇ ಆಗಿದ್ದಾರೆ ಎಂದು ಅಭಿನಂದಿಸಿ ಶುಭಕೋರಿದರು.
ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ಇದರ ನಿರ್ದೇಶಕರಾದ ಮೋಹನ ಭಾಸ್ಕರ ಹೆಗಡೆ, ಹಿರಿಯ ಸಾಮಾಜಿಕ ಧುರೀಣರಾದ ಕುಂಭಾಶಿಯ ಕೃಷ್ಣಪ್ರಸಾದ ಅಡ್ಯಂತಾಯ ಅಭ್ಯಾಗತರಾಗಿ ಭಾಗವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ. ಜಿ ಶೆಟ್ಟಿ ಉಪಸ್ಥಿತರಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ.ಹೆಗಡೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು.
ಕೋಶಾಧಿಕಾರಿ ಪ್ರೊ ಕೆ ಸದಾಶಿವ ರಾವ್ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾಪ್ರಸಾದ್ ಸಹಕರಿಸಿದರು.ಪ್ರಶಸ್ತಿ ಪ್ರದಾನ ಪೂರ್ವದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಶ್ರೀರಂಗ ತುಲಾಭಾರ ತಾಳಮದ್ದಲೆ ಸೊಗಸಾಗಿ ಪ್ರಸ್ತುತಗೊಂಡಿತು.

