SIR ಸ್ಟೇಟಸ್ ಚೆಕ್ ಮಾಡುವುದು ಹೇಗೆ? ಚುನಾವಣಾ ಆಯೋಗದಿಂದ SMS ಸೌಲಭ್ಯ

0
29

ರಾಜ್ಯದಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಿ ಮತದಾರರಿಂದ ಅರ್ಜಿಗಳನ್ನು ಸಂಗ್ರಹಿಸುತ್ತಿದ್ದಾರೆ. ಮತದಾರರು ಸಹ ಸ್ವಯಂಪ್ರೇರಿತರಾಗಿ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸುತ್ತಿದ್ದು, ಪ್ರತಿದಿನ ಸಂಗ್ರಹವಾಗುವ ಅರ್ಜಿಗಳನ್ನು ಚುನಾವಣಾ ಆಯೋಗದ ಡೇಟಾಬೇಸ್‌ಗೆ ಅಪ್‌ಲೋಡ್ ಮಾಡಲಾಗುತ್ತಿದೆ.

ಈ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಅತ್ಯಂತ ಮಹತ್ವದ್ದಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಸರಿಯಾಗಿ ನೋಂದಣಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಎಸ್‌ಎಂಎಸ್ ಮೂಲಕ ಸ್ಟೇಟಸ್ ಪರಿಶೀಲಿಸುವ ವಿಶೇಷ ಸೌಲಭ್ಯವನ್ನು ಒದಗಿಸಿದೆ.

ಒಂದೇ SMS ಮೂಲಕ SIR ಸ್ಟೇಟಸ್ ತಿಳಿಯಿರಿ

ನಿಮ್ಮ ಮೊಬೈಲ್‌ನಿಂದ ECI ಎಂದು ಟೈಪ್ ಮಾಡಿ, ಒಂದು ಸ್ಪೇಸ್ ನೀಡಿ, ಬಳಿಕ ನಿಮ್ಮ ಮತದಾರರ ಗುರುತಿನ ಚೀಟಿ (EPIC/Voter ID) ಸಂಖ್ಯೆಯನ್ನು ನಮೂದಿಸಿ 1950 ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸಬೇಕು.

ಕೆಲವೇ ಕ್ಷಣಗಳಲ್ಲಿ ಚುನಾವಣಾ ಆಯೋಗದಿಂದ ಮರುಸಂದೇಶ (Reply SMS) ಬರಲಿದ್ದು, ಅದರಲ್ಲಿ:

  • ಮತದಾರರ ಹೆಸರು
  • ಸೀರಿಯಲ್ ಸಂಖ್ಯೆ
  • ಮತಗಟ್ಟೆ (Polling Booth)
  • ಪಾರ್ಟ್ ಸಂಖ್ಯೆ
  • ವಿಧಾನಸಭಾ ಕ್ಷೇತ್ರದ ವಿವರ

ಲಭ್ಯವಾಗುತ್ತದೆ. ಈ ಮಾಹಿತಿ ದೊರೆತರೆ ನಿಮ್ಮ ಹೆಸರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿ ದಾಖಲಾಗಿರುವುದಾಗಿ ಪರಿಗಣಿಸಬಹುದು.

ಒಂದು ವೇಳೆ ಎಸ್‌ಎಂಎಸ್ ಬರದಿದ್ದರೆ ಅಥವಾ ವಿವರಗಳಲ್ಲಿ ಯಾವುದೇ ತಪ್ಪು ಕಂಡುಬಂದರೆ ಕೂಡಲೇ ನಿಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿ (BLO) ಅಥವಾ ಸಂಬಂಧಪಟ್ಟ ಚುನಾವಣಾಧಿಕಾರಿಯನ್ನು ಸಂಪರ್ಕಿಸುವಂತೆ ಆಯೋಗ ಸೂಚಿಸಿದೆ.

ಆನ್‌ಲೈನ್‌ನಲ್ಲೂ ಅವಕಾಶ

ಎಸ್‌ಐಆರ್ ಪ್ರಕ್ರಿಯೆಯಡಿ ಅಗತ್ಯ ನಮೂನೆಗಳನ್ನು ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕವೂ ಭರ್ತಿ ಮಾಡಬಹುದಾಗಿದೆ. ಬಳಿಕ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಬಿಎಲ್‌ಒಗೆ ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಬಳಿಕವೂ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿ ಅಗತ್ಯವಿದ್ದರೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ.

ಮುಂಬರುವ ಚುನಾವಣೆಗಳಲ್ಲಿ ಯಾವುದೇ ತೊಂದರೆ ಆಗದಂತೆ ಈಗಲೇ ತಮ್ಮ ಹೆಸರು ಮತ್ತು ವಿವರಗಳನ್ನು ಪರಿಶೀಲಿಸಿಕೊಳ್ಳುವಂತೆ ಚುನಾವಣಾ ಆಯೋಗ ಮತದಾರರಿಗೆ ಮನವಿ ಮಾಡಿದೆ.