ಮೈಸೂರು : ಜಿಲ್ಲೆಯ ಹುಣಸೂರಿನ ನ್ಯೂ ಮಾರುತಿ ಬಡಾವಣೆಯಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಮೃತರನ್ನು ಹರೀಶ್ (49), ಅವರ ಪತ್ನಿ ನಿಶ್ಚಿತ (36) ಹಾಗೂ ಪುತ್ರಿಯರಾದ ನೆಕ್ಸಾ (13) ಮತ್ತು ರಕ್ಷಾ (6) ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯಂತೆ, ಹರೀಶ್ ಮೊದಲು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ಮನೆಯ ಮೊದಲ ಮಹಡಿಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಹುಣಸೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮನೆಯಲ್ಲಿ ಡೆತ್‌ನೋಟ್ ಪತ್ತೆಯಾಗಿದೆ. ಅದರಲ್ಲಿ ಸಾಲದ ಒತ್ತಡ, ಆಸ್ತಿ ಹಂಚಿಕೆ ಹಾಗೂ ಅಗತ್ಯ ದಾಖಲೆಗಳು ಲಾಕರ್‌ನಲ್ಲಿ ಇರುವ ಕುರಿತು ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾಧ್ಯಮಗಳಿಗೆ ಮಾಹಿತಿ ನೀಡಿ, ಹರೀಶ್ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಜಮೀನು ಖರೀದಿ ಸಂಬಂಧ ಸಾಲದ ಒತ್ತಡ ಎದುರಿಸುತ್ತಿದ್ದ ವಿಚಾರ ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿದೆ ಎಂದು ತಿಳಿಸಿದ್ದಾರೆ. ಅವರ ಹೆಸರಿನಲ್ಲಿದ್ದ ಮೂರು ನಿವೇಶನ, ಮನೆ ಹಾಗೂ ಕಾರನ್ನು ಯಾರಿಗೆ ಹಂಚಬೇಕು ಎಂಬ ಸೂಚನೆಗಳನ್ನೂ ಅವರು ಬರೆದಿರುವುದಾಗಿ ಮಾಹಿತಿ ನೀಡಿದ್ದಾರೆ.
ಸುಮಾರು 14 ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಯೊಂದಿಗೆ ಹರೀಶ್ ಅವರ ತಾಯಿಯೂ ವಾಸಿಸುತ್ತಿದ್ದರು. ಆದರೆ ಘಟನೆಗೆ ಎರಡು ದಿನಗಳ ಮೊದಲು ಅವರು ಪ್ರವಾಸಕ್ಕೆ ತೆರಳಿದ್ದರಿಂದ ದುರಂತದಿಂದ ಪಾರಾಗಿದ್ದಾರೆ.
ಪ್ರಕರಣದ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದ್ದು, ಆರ್ಥಿಕ ಒತ್ತಡ, ಕೌಟುಂಬಿಕ ಕಲಹ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

