ನ.1ರಿಂದ ಆಟೋ ಪ್ರಯಾಣ ದುಬಾರಿ : ಆರ್‌ಟಿಎಯಿಂದ ಹೊಸ ದರ ಪ್ರಕಟ

0
118

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋರಿಕ್ಷಾ ಪ್ರಯಾಣ ದರವನ್ನು ಮರು ಪರಿಷ್ಕರಿಸಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹೊಸ ಆದೇಶ ಹೊರಡಿಸಿದೆ. ಪರಿಷ್ಕೃತ ದರಗಳು 2026ರ ನವೆಂಬರ್ 1ರಿಂದ ಜಿಲ್ಲೆಯಾದ್ಯಂತ ಜಾರಿಗೆ ಬರಲಿವೆ.

ಸಾರ್ವಜನಿಕರು ಹಾಗೂ ಆಟೋರಿಕ್ಷಾ ಚಾಲಕರ ಬೇಡಿಕೆಗಳು, ಚಾಲಕರ ವಾಸ್ತವಿಕ ಖರ್ಚು–ವೆಚ್ಚ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ಈ ಪರಿಷ್ಕೃತ ದರ ನಿಗದಿಪಡಿಸಲಾಗಿದೆ. 2026ರ ಆಗಸ್ಟ್ 28ರಂದು ಹೊರಡಿಸಲಾಗಿದ್ದ ಹಿಂದಿನ ದರ ಆದೇಶವನ್ನು ಹಿಂಪಡೆದು ಹೊಸ ಆದೇಶ ಹೊರಡಿಸಲಾಗಿದೆ.

ಮೊದಲ 1.5 ಕಿ.ಮೀ.ಗೆ ₹40

ಹೊಸ ದರ ಪಟ್ಟಿಯಂತೆ, ಗರಿಷ್ಠ ಮೂರು ಪ್ರಯಾಣಿಕರಿಗೆ ಮೊದಲ 1.5 ಕಿಲೋಮೀಟರ್‌ಗೆ ₹40 ನಿಗದಿಪಡಿಸಲಾಗಿದೆ. ಬಳಿಕ ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗೆ ₹23 ಶುಲ್ಕ ವಿಧಿಸಬಹುದು.

ಆಟೋ ಕಾಯುವಿಕೆಯ ಸಂದರ್ಭದಲ್ಲಿ ಮೊದಲ 10 ನಿಮಿಷ ಉಚಿತವಾಗಿದ್ದು, ನಂತರದ 15 ನಿಮಿಷಗಳ ಅವಧಿಗೆ ₹5 ಶುಲ್ಕ ನಿಗದಿಪಡಿಸಲಾಗಿದೆ. ಲಗೇಜ್‌ಗೆ ಮೊದಲ 20 ಕೆ.ಜಿ. ಉಚಿತವಾಗಿದ್ದು, ನಂತರದ ಪ್ರತಿ 20 ಕೆ.ಜಿ.ಗೆ ₹5 ಶುಲ್ಕ ವಿಧಿಸಬಹುದಾಗಿದೆ.

ರಾತ್ರಿ ಸಮಯದಲ್ಲಿ ಒಂದೂವರೆ ಪಟ್ಟು ದರ

ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಪ್ರಯಾಣಿಸುವ ಪ್ರಯಾಣಿಕರಿಂದ ಸಾಮಾನ್ಯ ದರದ 1.5 ಪಟ್ಟು ಶುಲ್ಕ ಪಡೆಯಲು ಅನುಮತಿ ನೀಡಲಾಗಿದೆ.

ಪರಿಷ್ಕೃತ ದರ ಜಾರಿಗೆ ಬರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಆಟೋರಿಕ್ಷಾ ಚಾಲಕರು ಹಾಗೂ ಮಾಲಕರು ತಮ್ಮ ವಾಹನಗಳ ಫ್ಲಾಗ್ ಮೀಟರ್‌ಗಳನ್ನು ನೂತನ ದರಕ್ಕೆ ಅನುಗುಣವಾಗಿ ಮರುಮಾಪನ ಮಾಡಿಸಿ, ಸೀಲ್ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಅಲ್ಲದೆ, ಪರಿಷ್ಕೃತ ದರದ ಅಧಿಕೃತ ಪಟ್ಟಿಯನ್ನು ಪ್ರಯಾಣಿಕರಿಗೆ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಪ್ರತಿಯೊಂದು ಆಟೋರಿಕ್ಷಾದಲ್ಲೂ ಪ್ರದರ್ಶಿಸುವುದು ಕಡ್ಡಾಯವಾಗಿದೆ.

ನಿಗದಿತ ದರಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುವುದು ಅಥವಾ ಪರಿಷ್ಕೃತ ನಿಯಮಗಳನ್ನು ಪಾಲಿಸದಿರುವುದು ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧ ದಂಡ, ಪರವಾನಗಿ ಅಮಾನತು ಅಥವಾ ರದ್ದತಿ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.