ಸರ್ಕಾರಿ ಆಸ್ಪತ್ರೆಗಳಿಗೆ ಭರ್ಜರಿ ಬಲ: 3,000ಕ್ಕೂ ಹೆಚ್ಚು ವೈದ್ಯರು, ನರ್ಸ್‌ಗಳ ನೇಮಕಾತಿಗೆ ಯು.ಟಿ. ಖಾದರ್ ಚಾಲನೆ

0
23

ಬೆಂಗಳೂರು: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಆರೋಗ್ಯ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳಿಗೆ ಚಾಲನೆ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳ ಕೊರತೆಯನ್ನು ನಿವಾರಿಸುವ ಉದ್ದೇಶದಿಂದ 3,000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಇಲಾಖೆ ಮುಂದಾಗಿದೆ.

ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸುದೀರ್ಘ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಪ್ರಸ್ತುತ 1,280 ಎಂಬಿಬಿಎಸ್ ವೈದ್ಯರು, 924 ತಜ್ಞ ವೈದ್ಯರು ಹಾಗೂ 892 ನರ್ಸ್‌ಗಳ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಯೋಜನೆ ರೂಪಿಸಲಾಗಿದೆ.

ಕೆಇಎ ಮೂಲಕ 200 ವೈದ್ಯರನ್ನು ನೇರ ಮತ್ತು ಖಾಯಂ ನೇಮಕ ಮಾಡಿಕೊಳ್ಳಲಾಗುವುದು. ಜೊತೆಗೆ 400 ನರ್ಸ್‌ಗಳು, 400 ಫಾರ್ಮಸಿಸ್ಟ್‌ಗಳು ಹಾಗೂ 400 ಲ್ಯಾಬ್ ಟೆಕ್ನಿಷಿಯನ್‌ಗಳ ನೇಮಕಾತಿಯೂ ನಡೆಯಲಿದೆ. ಪರೀಕ್ಷೆ ಪೂರ್ಣಗೊಂಡ ಒಂದು ವಾರದೊಳಗೆ ನೇಮಕಾತಿ ಪತ್ರ ವಿತರಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.

ಇನ್ನೂ 1,000 ವೈದ್ಯರ ಹುದ್ದೆಗಳನ್ನು ತುರ್ತುವಾಗಿ ಭರ್ತಿ ಮಾಡಲು ಜಿಲ್ಲಾ ಆರೋಗ್ಯಾಧಿಕಾರಿಗಳ ಮಟ್ಟದಲ್ಲಿ ವಾಕ್-ಇನ್ ಸಂದರ್ಶನ ನಡೆಸಲಾಗುತ್ತದೆ. ಆಯ್ಕೆಯಾಗುವ ವೈದ್ಯರಿಗೆ ತಿಂಗಳಿಗೆ ₹1.10 ಲಕ್ಷ ಗೌರವಧನ ನೀಡಲಾಗುವುದು. ಗ್ರಾಮೀಣ ಹಾಗೂ ದುರ್ಗಮ ಪ್ರದೇಶಗಳಲ್ಲಿ ಐದು ವರ್ಷಗಳ ಸೇವೆ ಸಲ್ಲಿಸುವ ಗುತ್ತಿಗೆ ವೈದ್ಯರಿಗೆ ಭವಿಷ್ಯದಲ್ಲಿ ಖಾಯಂ ನೇಮಕಾತಿ ಹಾಗೂ ಉನ್ನತ ಶಿಕ್ಷಣ ಪ್ರವೇಶದಲ್ಲಿ ವಿಶೇಷ ಆದ್ಯತೆ ನೀಡುವ ಭರವಸೆಯನ್ನೂ ಸಚಿವರು ನೀಡಿದ್ದಾರೆ.

ಔಷಧಿಗಳ ಗುಣಮಟ್ಟ ಮತ್ತು ಲಭ್ಯತೆಯ ಮೇಲೂ ವಿಶೇಷ ಗಮನ ಹರಿಸಿರುವ ಇಲಾಖೆ, ಸರ್ಕಾರಿ ಉಗ್ರಾಣಗಳಿಗೆ ಬರುವ ಪ್ರತಿಯೊಂದು ಔಷಧಿಯ ಮರುಪರಿಶೀಲನೆ ಕಡ್ಡಾಯಗೊಳಿಸಲು ನಿರ್ಧರಿಸಿದೆ. ಈಗಾಗಲೇ 81 ಅಗತ್ಯ ಔಷಧಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಧ್ಯವರ್ತಿಗಳಿಲ್ಲದೆ ನೇರ ಖರೀದಿ ವ್ಯವಸ್ಥೆ ಜಾರಿಗೊಳಿಸುವ ಕುರಿತು ಚಿಂತನೆ ನಡೆಸಲಾಗಿದೆ.

ಈ ಕ್ರಮಗಳಿಂದ ರಾಜ್ಯದ ಸರ್ಕಾರಿ ಆರೋಗ್ಯ ಸೇವೆಗಳು ಮತ್ತಷ್ಟು ಬಲಗೊಳ್ಳಲಿದ್ದು, ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲ ವರ್ಗದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಸುಲಭವಾಗಿ ದೊರೆಯುವ ನಿರೀಕ್ಷೆ ಮೂಡಿದೆ.

LEAVE A REPLY

Please enter your comment!
Please enter your name here