
ಉಡುಪಿ : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಪ್ಪುಂದದಲ್ಲಿ ನವರಾತ್ರಿ ಪ್ರಯುಕ್ತ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ‘ಹುಲಿ ಪರ್ವ 2026’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶೇಖರ್ ಪೂಜಾರಿ ಉಪ್ಪುಂದ ಅವರ ಸಾರಥ್ಯದಲ್ಲಿ, ಶ್ರೀ ದುರ್ಗಾ ಟೈಗರ್ಸ್ ಉಪ್ಪುಂದ ಇವರ ಸಂಯೋಜನೆಯಲ್ಲಿ ಉಪ್ಪುಂದ ರಥಬೀದಿಯಲ್ಲಿ ಅಕ್ಟೋಬರ್ 31ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಉಡುಪಿ ಹಾಗೂ ಮಂಗಳೂರು ಭಾಗದ ಆಯ್ದ ಪ್ರತಿಷ್ಠಿತ ತಂಡಗಳಿಂದ ಆಕರ್ಷಕ ಹುಲಿ ಕುಣಿತ ಸ್ಪರ್ಧೆ ನಡೆಯಲಿದೆ.
ಕಾರ್ಯಕ್ರಮದ ಪೂರ್ವಭಾವಿಯಾಗಿ ಇಂದು ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದ ಸಿದ್ಧತೆಗಳು ಹಾಗೂ ಮುಂದಿನ ಎಲ್ಲಾ ಕಾರ್ಯಗಳು ಯಾವುದೇ ವಿಘ್ನವಿಲ್ಲದೆ ಯಶಸ್ವಿಯಾಗಿ ನೆರವೇರಲಿ ಎಂದು ಬೇಡಿಕೊಂಡರು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಡಿ.ಟಿ. ಸೀತಾರಾಮ ಮಯ್ಯ, ಶ್ರೀ ದುರ್ಗಾ ಟೈಗರ್ಸ್ ಸಂಸ್ಥೆಯು ಕಳೆದ ಮೂರು ವರ್ಷಗಳಿಂದ ಮನೆಮನೆಗೆ ತೆರಳಿ ಪರಂಪರೆಯ ಹುಲಿವೇಷವನ್ನು ಪ್ರದರ್ಶಿಸುತ್ತಾ, ಕರಾವಳಿಯ ವಿಶಿಷ್ಟ ಸಂಸ್ಕೃತಿ ಮತ್ತು ಕಲಾ ಪರಂಪರೆಯನ್ನು ಉಳಿಸುವ ಕಾರ್ಯ ಮಾಡುತ್ತಿದೆ ಎಂದರು.
ಅಂತರಾಷ್ಟ್ರೀಯ ಜಾದುಗಾರ ಓಂ ಗಣೇಶ ಉಪ್ಪುಂದ ಮಾತನಾಡಿ, ಹುಲಿವೇಷವು ಕರಾವಳಿಯ ವಿಶಿಷ್ಟ ಪರಂಪರೆ ಹಾಗೂ ಸಾಂಸ್ಕೃತಿಕ ಪ್ರತೀಕವಾಗಿದೆ. ಇಂತಹ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸುವಲ್ಲಿ ಹುಲಿ ವೇಷದಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಶೇಖರ್ ಪೂಜಾರಿ ಮಾತನಾಡಿ, ಈ ವರ್ಷ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಿದ್ದೇವೆ. ಉಡುಪಿ ಹಾಗೂ ಮಂಗಳೂರು ಭಾಗದ ಪ್ರತಿಷ್ಠಿತ ಹುಲಿವೇಷ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಪ್ರಥಮ ಬಹುಮಾನವಾಗಿ ₹2,55,555 ಹಾಗೂ ದ್ವಿತೀಯ ಬಹುಮಾನವಾಗಿ ₹1,55,555 ಜೊತೆಗೆ ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು. ಅಲ್ಲದೆ ಅತ್ಯುತ್ತಮ ಪ್ರದರ್ಶನ ನೀಡುವ ಕಲಾವಿದರಿಗೆ ವೈಯಕ್ತಿಕ ಬಹುಮಾನಗಳನ್ನೂ ನೀಡಲಾಗುವುದು. ಈ ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರು, ಕಲಾಭಿಮಾನಿಗಳು ಹಾಗೂ ಎಲ್ಲರ ಸಹಕಾರ ಅಮೂಲ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗೌರಿ ದೇವಾಡಿಗ, ಮಂಜು ದೇವಾಡಿಗ ಅರೆಹಾಡಿ, ಮಂಜುನಾಥ ದೇವಾಡಿಗ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಮಂಜುನಾಥ್ ದೇವಾಡಿಗ ರಥಬೀದಿ, ರವೀಂದ್ರ ಪ್ರಭು, ಭರತ್ ದೇವಾಡಿಗ, ಮಂಜುನಾಥ್ ಪೂಜಾರಿ, ರಾಮದಾಸ ಖಾರ್ವಿ, ದೇವಸ್ಥಾನದ ಅರ್ಚಕರಾದ ಪುರಾಣಿಕ್, ಉದಯ ಪೂಜಾರಿ, ದುರ್ಗಾ ಫ್ರೆಂಡ್ಸ್ ಅಧ್ಯಕ್ಷರಾದ ಕೇಶವ ದೇವಾಡಿಗ, ದುರ್ಗಾ ಟೈಗರ್ಸ್‌ನ ಸರ್ವ ಸದಸ್ಯರು, ಸ್ನೇಹಿತ ವರ್ಗ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಶೇಖರ್ ಪೂಜಾರಿ ಸ್ವಾಗತಿಸಿ, ವಂದಿಸಿದರು.
