ಉಡುಪಿ: ಮಾನವ ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಹಕ್ಕು ಮತ್ತು ಕರ್ತವ್ಯಗಳನ್ನು ಸಮಾನವಾಗಿ ನೋಡುವ ಮನೋಭಾವವನ್ನು ಎಲ್ಲರೂ ಹೊಂದಿದರೆ ಮಾತ್ರ ನಮ್ಮ ನಾಗರಿಕ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಉಳಿಯಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಕಿರಣ್ ಎಸ್ ಗಂಗಣ್ಣವರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅಜ್ಜರಕಾಡು ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಮಾನವ ಹಕ್ಕುಗಳ ಸಂಘ ಮತ್ತು ಐಕ್ಯೂಎಸಿ ಸಹಭಾಗಿತ್ವದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಮನು ಪಟೀಲ್ ಬಿ. ವೈ ಮುಖ್ಯ ಅತಿಥಿಗಳಾಗಿ ಮಾತನಾಡಿ ಮಾನವ ಹಕ್ಕುಗಳು ಇಂದು ನಮ್ಮ ದೈನಂದಿನ ಅಗತ್ಯತೆಗಳಾಗಿವೆ. ನಾವು ನಮ್ಮ ಹಕ್ಕುಗಳ ಜೊತೆಗೆ ಇತರರ ಹಕ್ಕುಗಳನ್ನು ಅರಿತು ಗೌರವಿಸಿ ಬದುಕುವುದನ್ನು ಕಲಿಯಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮಾನವ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಎಲ್ಲರು ಒಬ್ಬರಿಗೊಬ್ಬರು ಸಮಾನರು ಇಲ್ಲಿ ಯಾವುದೇ ತಾರತಮ್ಯಗಳಿಗೆ ಅವಕಾಶ ಮಾಡಿ ಕೊಡಬಾರದು ಎಂದರು.
ಕಾರ್ಯಕ್ರಮದಲ್ಲಿ ಸುರತ್ಕಲ್ ಗೋವಿಂದ ದಾಸ್ ಕಾಲೇಜು ರಾಜ್ಯಶಾಸ್ತ ವಿಭಾಗದ ಮುಖ್ಯಸ್ಥರಾದ ಡಾ. ಆಶಾಲತಾ ಪಿ. ಸಂಪನ್ಮೂಲ ವ್ಯಕ್ತಿಯಾಗಿ ವಿಶೇಷ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಸೋಜನ್ ಕೆ.ಜಿ, ಮತ್ತು ಐಕ್ಯೂಎಸಿ ಸಂಚಾಲಕರಾದ ಪ್ರೊ. ಶ್ರೀಮತಿ ಅಡಿಗ ಉಪಸ್ಥಿತರಿದ್ದರು. ಕಾಲೇಜಿನ ಮಾನವ ಹಕ್ಕು ಸಂಘದ ಸಂಚಾಲಕ ಮಂಜುನಾಥ ಅತಿಥಿಗಳನ್ನು ಸ್ವಾಗತಿಸಿ, ಡಾ. ರಾಜೇಂದ್ರ ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

