
ಬಂಟ್ವಾಳ : ಮಾನವಿಕ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಜೀವನ ಕೌಶಲ್ಯಗಳನ್ನು ಕಲಿತು ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ತಮ್ಮ ಬದುಕನ್ನು ಸಮಾಜದೊಂದಿಗೆ ಸದಾ ತೆರೆದಿಟ್ಟುಕೊಂಡಿರಬೇಕು. ಆಗ ಮಾತ್ರ ಅವರ ನಿಜವಾದ ವ್ಯಕ್ತಿತ್ವ ಅನಾವರಣಗೊಳ್ಳಲು ಸಾಧ್ಯ ಎಂದು ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಡಿ. ಮಂಚಿ ಹೇಳಿದರು.
ಅವರು ಕಾಲೇಜಿನ ಮಾನವಿಕ ಸಂಘದ ಆಶ್ರಯದಲ್ಲಿ ಮಾನವಿಕ ವಿಭಾಗದ ವಿದ್ಯಾರ್ಥಿಗಳಿಗೆ ಲಭ್ಯವಿರುವ ಉದ್ಯೋಗಾವಕಾಶಗಳ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಕೆ.ಎಸ್. ಮಾತನಾಡಿ, ಶಿಕ್ಷಣ ಮತ್ತು ಉದ್ಯೋಗ ಪರಸ್ಪರ ಸಂಬಂಧ ಹೊಂದಿವೆ. ಉದ್ಯೋಗ ಕ್ಷೇತ್ರದಲ್ಲಿ ಹಲವು ಅವಕಾಶಗಳಿದ್ದು, ಅವು ನಮ್ಮನ್ನು ಅರಸಿ ಬರುವುದಿಲ್ಲ. ವಿದ್ಯಾರ್ಥಿಗಳು ಅವಕಾಶಗಳನ್ನು ಗುರುತಿಸಿ ಅವುಗಳ ಬೆನ್ನತ್ತಿ ಸಾಗಬೇಕು ಎಂದರು.
ಉತ್ತಮ ಉದ್ಯೋಗ ಪಡೆಯಲು ಸಾಕಷ್ಟು ಅಧ್ಯಯನದ ಜೊತೆಗೆ ನಿರಂತರ ಪ್ರಯತ್ನವೂ ಅಗತ್ಯ. ಸತತ ಪರಿಶ್ರಮ ಮತ್ತು ಸೂಕ್ತ ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು ಎಂದು ಅವರು ಹೇಳಿದರು.
ಮಾನವಿಕ ಸಂಘದ ಅಧ್ಯಕ್ಷೆ ರಕ್ಷಿತಾ ರೈ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಧನ್ಯಶ್ರೀ ಸ್ವಾಗತಿಸಿದರು. ಗಾನ ವಂದಿಸಿದರು. ಸ್ಪೂರ್ತಿ ಎಂ. ಕಾರ್ಯಕ್ರಮ ನಿರೂಪಿಸಿದರು. ಶ್ರುತಿ ಮತ್ತು ತಂಡದವರು ಪ್ರಾರ್ಥಿಸಿದರು. ಉಪನ್ಯಾಸಕಿ ರಂಜನಿ ಕಾರ್ಯಕ್ರಮಕ್ಕೆ ಸಹಕರಿಸಿದರು.
