ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ – ಕೇರಳ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ : ಕೊಡವೂರು

0
16

ಕೇರಳ ಸರ್ಕಾರವು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಕಾರ್ಯಗಳಿಗೆ ಬೆಂಬಲ ನೀಡುತ್ತಿರುವುದು ಖಂಡನೀಯ ಎಂದು ಕೆ. ವಿಜಯ ಕೊಡವೂರು ಆಕ್ರೋಶ ವ್ಯಕ್ತಪಡಿಸಿದರು.

ಕೇರಳದ ಜೋಡುಕಲ್ಲು ಎಂಬ ಗ್ರಾಮದಲ್ಲಿ ಗಣೇಶೋತ್ಸವ ಹಾಗೂ ಶಾರದಾ ಮಹೋತ್ಸವದಂತಹ ಪವಿತ್ರ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅಳವಡಿಸಲಾಗಿದ್ದ ತಗಡಿನ ಚಪ್ಪರವನ್ನು ತೆರವುಗೊಳಿಸುವಂತೆ ನ್ಯಾಯಾಲಯದ ನೋಟಿಸ್ ತರಿಸುವ ಮೂಲಕ ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ಪಕ್ಷಗಳು ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುತ್ತಿವೆ ಎಂದು ಅವರು ಆರೋಪಿಸಿದರು.

ಬ್ರಿಟಿಷರು ಭಾರತವನ್ನು ಬಿಟ್ಟು ಹೋದರೂ, ಅವರ ಕಾಲದಿಂದಲೂ ನಡೆದುಕೊಂಡು ಬಂದಿರುವ ಹಿಂದೂ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವ ಮನೋಭಾವ ಇನ್ನೂ ಮುಂದುವರಿದಿರುವುದು ದುರದೃಷ್ಟಕರ. ಜೋಡುಕಲ್ಲಿನಲ್ಲಿ ಗಣೇಶೋತ್ಸವ ನಡೆಯುವ ಸ್ಥಳದಲ್ಲಿ ಹಲವು ವರ್ಷಗಳಿಂದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ. ಇಂತಹ ಸಂಪ್ರದಾಯಗಳನ್ನು ಸಹಿಸದ ಕೆಲವು ಶಕ್ತಿಗಳು ಕಾರ್ಯಕ್ರಮದ ಸ್ಥಳವನ್ನು ತೆರವುಗೊಳಿಸಲು ನ್ಯಾಯಾಲಯದ ಮೊರೆ ಹೋಗಿರುವುದು ಖಂಡನೀಯ.

ಅದೇ ಪ್ರದೇಶದಲ್ಲಿ ಹಲವು ಧಾರ್ಮಿಕ ಕಟ್ಟಡಗಳು ಹಾಗೂ ಇತರ ಸಂಸ್ಥೆಗಳಿರುವಾಗ ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳ ಮೇಲೆಯೇ ಯಾಕೆ ಆಕ್ಷೇಪ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಹಿಂದೂಗಳ ಧಾರ್ಮಿಕ ಹಕ್ಕು, ಸಂಪ್ರದಾಯ ಮತ್ತು ಆಚರಣೆಗಳಿಗೆ ಧಕ್ಕೆ ತರುವ ಪ್ರಯತ್ನಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇಂತಹ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕ್ರಮಗಳು ಮುಂದುವರಿದರೆ ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕೆ. ವಿಜಯ ಕೊಡವೂರು ಎಚ್ಚರಿಕೆ ನೀಡಿದರು.