ವಿಟ್ಲ : ಅಕ್ರಮವಾಗಿ ಕೆಂಪುಕಲ್ಲುಗಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ವಿಟ್ಲ ಠಾಣಾ ಪೊಲೀಸರು ಸಾಲೆತ್ತೂರು ಚೆಕ್‌ಪೋಸ್ಟ್‌ನಲ್ಲಿ ತಡೆದು ವಶಕ್ಕೆ ಪಡೆದ ಘಟನೆ ನಡೆದಿದೆ.
ಆ.7ರ ರಾತ್ರಿ ವಿಟ್ಲ ಪೊಲೀಸರು ಸಾಲೆತ್ತೂರು ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಆ.8ರ ಬೆಳಗ್ಗೆ ಆನೆಕಲ್ಲು ಕಡೆಯಿಂದ ಬಂದ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ, ಲಾರಿಯಲ್ಲಿ ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಸುಮಾರು 200 ಕೆಂಪುಕಲ್ಲುಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ.
ಲಾರಿ ಚಾಲಕನನ್ನು ವಿಚಾರಣೆ ನಡೆಸಿ, ಕೆಂಪುಕಲ್ಲು ಸಾಗಾಟಕ್ಕೆ ಸಂಬಂಧಿಸಿದ ಪರವಾನಿಗೆ ಹಾಗೂ ಅಧಿಕೃತ ದಾಖಲೆಗಳನ್ನು ಹಾಜರುಪಡಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ ಚಾಲಕನ ಬಳಿ ಯಾವುದೇ ಸೂಕ್ತ ದಾಖಲೆಗಳು ಇಲ್ಲದಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು, ಅಕ್ರಮ ಕೆಂಪುಕಲ್ಲು ಸಾಗಾಟಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

