ಕಾರ್ಕಳ: ಇಂದಿನ ಡಿಜಿಟಲ್ ಯುಗದಲ್ಲಿ ಸುದ್ದಿಗಳು ಅತ್ಯಂತ ಧಾವಂತ ಹಾಗೂ ಸಾಗುತ್ತಿವೆ. ಮಾಹಿತಿ ತಂತ್ರಜ್ಞಾನ ಬೆಳೆದಂತೆಲ್ಲಾ ಸುದ್ದಿಗಳ ಹರಿವು ಹೆಚ್ಚಾಗಿದ್ದು, ಈ ಹಂತದಲ್ಲಿ ಪ್ರಸಾರವಾಗುವ ಮಾಹಿತಿಗಳಲ್ಲಿ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂಬುದನ್ನು ಸರಿಯಾಗಿ ವಿಮರ್ಶಿಸಿ ಜನರಿಗೆ ತಲುಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಕರಾವಳಿ ಪ್ರಾಧಿಕಾರ ಅಧ್ಯಕ್ಷ ಎಂ.ಎ ಗಪೂರ್ ಹೇಳಿದರು.

ಅವರು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಕಳ ಇದರ ನೇತೃತ್ವದಲ್ಲಿ ಕ್ರಿಯೆಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಸಹಯೋಗದಲ್ಲಿ ಕ್ರಿಯೆಟಿವ್ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ಯಾಗಿ ಹಿರಿಯ ಪತ್ರಕರ್ತ ಬಿಪಿನ್ ಚಂದ್ರಪಾಲ್ ನಕ್ರೆ ಮಾತನಾಡಿ, ಇಂದು ಬ್ರೇಕಿಂಗ್ ನ್ಯೂಸ್’ ನೆಪದಲ್ಲಿ ಟಿವಿ ಹಾಗೂ ಮೊಬೈಲ್ ಪರದೆ ಮೇಲೆ ಬರುವ ಸುದ್ದಿಗಳು ಸತ್ಯ-ಸುಳ್ಳುಗಳ ಗೊಂದಲಕ್ಕೆ ಈಡಾಗಬಹುದು. ಡಿಜಿಟಲ್ ಮಾಧ್ಯಮದಲ್ಲಿ ಸುಳ್ಳು ಸುದ್ದಿಯನ್ನು ಅಳಿಸಬಹುದು ಅಥವಾ ಅಡಗಿಸಬಹುದು. ಆದರೆ, ಮುದ್ರಣ ಪತ್ರಿಕೆಗಳಲ್ಲಿ ಅದು ಸಾಧ್ಯವಿಲ್ಲ. ಪತ್ರಿಕೆಗಳಲ್ಲಿ ಆಳವಾದ ಸತ್ಯಶೋಧನೆ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಮುದ್ರಣ ಪತ್ರಿಕಾರಂಗ ಮತ್ತೆ ಶಕ್ತಿಯುತವಾಗಿ ಭುಗಿದೇಳುತ್ತಿರುವುದು ಸಮಾಧಾನಕರ ಸಂಗತಿ ಎಂದರು.ದೇಶದ ಭವಿಷ್ಯ ನಿರ್ಮಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗವಾದ ಮಾಧ್ಯಮಗಳ ಜವಾಬ್ದಾರಿಯಾಗಿದೆ. ಆದರೆ, ಈ ನಾಲ್ಕನೇ ಸ್ತಂಭದ ಸ್ವರೂಪ ಕೆಲವೊಮ್ಮೆ ಬದಲಾಗಿ ಸ್ತಂಭವೇ ಬಾಗುತ್ತಿರುವುದು ವಿಷಾದನೀಯ. ಹೀಗಾಗಿ ಪತ್ರಿಕಾ ಮಾಧ್ಯಮ ಜಾಗೃತವಾಗಬೇಕು. ಪತ್ರಿಕೆಗಳಿಗೂ ವಿದ್ಯಾರ್ಥಿಗಳಿಗೂ ನಿಕಟ ಸಂಬಂಧವಿದ್ದು, ಭಾಷೆ ಮತ್ತು ಜ್ಞಾನದ ಜೊತೆಗೆ ಸಾಮಾಜಿಕ, ವೈಜ್ಞಾನಿಕ ಹಾಗೂ ವೈಚಾರಿಕತೆಯನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ಪತ್ರಿಕೆಗಳಿಂದ ಆಗುತ್ತಿದೆ
ಕ್ರಿಯೆಟಿವ್ ಶಿಕ್ಷಣ ಸಂಸ್ಥೆಯ ಸಹಸಂಸ್ಥಾಪಕ ಅಶ್ವತ್ಥ್ ಎಸ್.ಎಲ್ ಅವರನ್ನು ಗೌರವಿಸಲಾಯಿತು. ಅವರ ಪರವಾಗಿ ಸಹಸಂಸ್ಥಾಪಕ ಗಣಪತಿ ಕೆ.ಎಸ್ ಸ್ವೀಕರಿಸಿದರು.
ಪ್ರಧಾನ ಕಾರ್ಯದರ್ಶಿ ಹರೀಶ್ ಸಚ್ಚರಿಪೇಟೆ, ಕೋಶಾಧಿಕಾರಿ ಸತೀಶ್ ಶೆಟ್ಟಿ ವಾಮದಪದವು ವೇದಿಕೆಯಲ್ಲಿದ್ದರು. ಜಿಲ್ಲಾ ಸಮಿತಿ ಉಪಾಧ್ಯಕ್ಷ ಉದಯಕುಮಾರ್ ಮುಂಡ್ಕೂರು ಸ್ವಾಗತಿಸಿದರು. ಕ್ರಿಯೆಟಿವ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಸಂಘದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರಜ್ಞಾ ರಾವ್ ಎಂ, ಶಿಥಿಲ್ ಎಸ್ ಶೆಟ್ಟಿ, ಸಮೀಕ್ಷಾ, ಐಪುನ್ ಮರಿಯಂ ಫಾತಿಮ, ತನಿಷ್ ಕುಮಾರ್, ಇವರಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಹರೀಶ್ ಆಚಾರ್ಯ ಹೆಸರು ವಾಚಿಸಿದರು. ಚೈತ್ರಾ ಕಬ್ಬಿನಾಲೆ ನಿರೂಪಿಸಿದರು. ಅವಿನ್ ಶೆಟ್ಟಿ ವಂದಿಸಿದರು.

