ಕಾವಳಕಟ್ಟೆ ಬಂಟ್ವಾಳದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಲಾದ ಭಾರತದ ಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗ ದರ್ಶನ ಮೇಳದ ಉದ್ಘಾಟನಾ ಸಮಾರಂಭವು ಭಕ್ತಿಭಾವದ ವಾತಾವರಣದಲ್ಲಿ ನಡೆಯಿತು.
ಸಮಾರಂಭವನ್ನು ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾಣಿಲ ಅವರು ಉದ್ಘಾಟಿಸಿದರು. ಈ ರೀತಿಯ ದ್ವಾದಶ ಜ್ಯೋತಿರ್ಲಿಂಗ ದರ್ಶನ ಕಾರ್ಯಕ್ರಮಗಳು ಎಲ್ಲಾ ಬ್ರಹ್ಮಕಲೋತ್ಸವಗಳಲ್ಲಿ ನಡೆಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ಸಂಸ್ಥೆಯ ಮಹತ್ವದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಶುಭ ಹಾರೈಸಿದರು. ತಮ್ಮ ಪೂರ್ವಾಶ್ರಮದಲ್ಲಿ ರಾಜಯೋಗಿ ವಿದ್ಯಾರ್ಥಿಯಾಗಿದ್ದುದನ್ನು ಸ್ಮರಿಸಿಕೊಂಡು ರಾಜಯೋಗದ ಮಹತ್ವವನ್ನು ವಿವರಿಸಿದರು.
ಹನ್ನೆರಡು ಜ್ಯೋತಿರ್ಲಿಂಗಗಳಿಗೆ ದೀಪ ಪ್ರಜ್ವಲನೆ ಕಾರ್ಯಕ್ರಮವನ್ನು ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ನೆರವೇರಿಸಿದರು. ಬ್ರಹ್ಮಕುಮಾರಿ ಸಂಸ್ಥೆಯ ಕಾರ್ಯವನ್ನು ಪ್ರಶಂಸಿಸಿದ ಅವರು, ದ್ವಾದಶ ಜ್ಯೋತಿರ್ಲಿಂಗ ದರ್ಶನದ ಲಾಭವನ್ನು ಎಲ್ಲರೂ ಪಡೆಯಲಿ ಎಂದು ಶುಭಕೋರಿದರು.
ಮುಖ್ಯ ಅತಿಥಿಗಳಾಗಿ ಅನಂತಕೃಷ್ಣ ಕುದ್ಧಣ್ಣಾಯ (ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ),ಸುದರ್ಶನ ಕೊಲ್ಲಿ (ಅಧ್ಯಕ್ಷರು, ಜೀರ್ಣೋದ್ದಾರ ಸಮಿತಿ),ಅತುಲ್ ಕುಮಾರ್ ಕೆ.ಎನ್. ಹಲೇಜಿ (ಅಧ್ಯಕ್ಷರು, ಬ್ರಹ್ಮಕಲೋತ್ಸವ ಸಮಿತಿ),ದುರ್ಗೇಶ್ ವಿ. ಕೆದಿಲಾಯ (ಪ್ರಧಾನ ಕಾರ್ಯದರ್ಶಿ, ಜೀರ್ಣೋದ್ದಾರ ಸಮಿತಿ),ಸಾಮ್ರಾಟ್ ಕರ್ಕೇರ (ಕೋಶಾಧಿಕಾರಿ, ಬ್ರಹ್ಮಕಲೋತ್ಸವ ಸಮಿತಿ), ಯುವರಾಜ್ ಅನಾರ್ (ಕರಾಯ ಕೊಲ್ಲಿ) ಉಪಸ್ಥಿತರಿದ್ದರು.
ಕಾವಳಕಟ್ಟೆ ಬಂಟ್ವಾಳದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಸರೋಜಿನಿಜೀಯವರು ಸಹಸ್ರ ಲಿಂಗಕ್ಕೆ ದೀಪ ಬೆಳಗಿಸಿ, ಈಶ್ವರೀಯ ವಿಶ್ವವಿದ್ಯಾಲಯದ ಗುರಿ, ಉದ್ದೇಶ ಹಾಗೂ ರಾಜಯೋಗ ಧ್ಯಾನ ಮತ್ತು ಸಹಜ ರಾಜಯೋಗ ಕುರಿತು ಮಾಹಿತಿ ನೀಡಿ ಆಶೀರ್ವಚನ ನೀಡಿದರು.
ಸಂಸ್ಥೆಯ ರಾಜಯೋಗಿ ಮಂಜುನಾಥ ಅವರು ಎಲ್ಲರನ್ನು ಸ್ವಾಗತಿಸಿ, ದ್ವಾದಶ ಜ್ಯೋತಿರ್ಲಿಂಗ ದರ್ಶನ ಏಪ್ರಿಲ್ 13ರಿಂದ 25ರವರೆಗೆ ನಡೆಯಲಿದ್ದು, ಕರಾಯ ಹಾಗೂ ಸುತ್ತಮುತ್ತಲಿನ ಭಕ್ತರು ಉಚಿತವಾಗಿ ಇದರ ಲಾಭ ಪಡೆಯಬಹುದು ಎಂದು ತಿಳಿಸಿದರು.

