ದೇವರು ಮೆಚ್ಚುವ ಕಾರ್ಯ ಮಾಡಿದ್ದಾರೆ– ಶಾಸಕ ಉಮಾನಾಥ ಕೋಟ್ಯಾನ್
ವಿದ್ಯಾ ದೇಗುಲವೇ ಮೊದಲ ದೇವಾಲಯ.ಬಾಲ್ಯದಿಂದಲೇ ಇಲ್ಲಿ ಪಡೆಯುವ ಸಂಸ್ಕಾರಯುತ ಶಿಕ್ಷಣದಿಂದ ಮಕ್ಕಳು ಮುಂದಕ್ಕೆ ಉತ್ತಮ ಪ್ರಜೆಗಳಾಗಿ ಶ್ರೇಷ್ಠ ಸಮಾಜ ನಿರ್ಮಾಣವಾಗುವುದು. ಈ ನಿಟ್ಟಿನಲ್ಲಿ ಇಲ್ಲಿನ ಕಡಲಕೆರೆಯ ಪ್ರೇರಣಾ ವಿದ್ಯಾ ಸಂಸ್ಥೆಯ ಆಡಳಿತ ವರ್ಗ, ಶಿಕ್ಷಕರು, ಪೋಷಕರು ದಾನಿಗಳ ನಿರಂತರ ಪ್ರಯತ್ನ ಮತ್ತ್ತು ಸಮರ್ಪಣಾ ಭಾವದ ಸೇವೆ ಸಲ್ಲಿಸುತ್ತಿರುವುದು ದೇವರು ಮೆಚ್ಚುವ ಕೆಲಸ ಎಂದು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಹೇಳಿದರು.
ಅವರು ಸೇವಾಂಜಲಿ ಎಜುಕೇಷನ್ ಟ್ರಸ್ಟ್ (ರಿ ) ಮೂಡುಬಿದಿರೆ ಪ್ರವರ್ತಿತ ಕಡಲಕೆರೆಯ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ದಿ. ಕೆ. ವಿಜಯ ಕಾಮತ್ ಮೂಡುಬಿದಿರೆ ಇವರ ಸ್ಮರಣಾರ್ಥ ಅವರ ಧರ್ಮಪತ್ನಿ ಗೀತಾ ವಿಜಯಾ ಕಾಮತರು 8ಲಕ್ಷ ರೂಪಾಯಿ ವೆಚ್ಚದಲ್ಲಿ ಕೊಡುಗೆಯಾಗಿ ನೀಡಿದ ಶಾಲಾ ನೂತನ ಕೊಠಡಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ದಾನಿಗಳು ಕೊಡುವ ಸವಲತ್ತಿನಿಂದ ಇಂದು ಶಾಲೆ ನಡೆಯುತ್ತಿದೆ .ಸನಾತನ ಹಿಂದೂ ಗುರುಕುಲ ಪದ್ದತಿಯ ಶಿಕ್ಷಣ ನೀಡುತ್ತಿರುವ ಪ್ರೇರಣಾ ಶಾಲೆಗೆ ಗೀತಾ ವಿಜಯಾ ಕಾಮತರ ಸೇವಾ ಸಮರ್ಪಣಾ ಭಾವನೆ ಇತರ ಎಲ್ಲರಿಗೂ ಪ್ರೇರಣೆ ಹಾಗೂ ಮಾದರಿಯಾಗಿದೆ ಎಂದು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶಾಲಾ ನೂತನ ಕೊಠಡಿಯನ್ನು ಕೊಡುಗೆಯಾಗಿ ನೀಡಿದ ದಾನಿ ಗೀತಾ ವಿಜಯ ಕಾಮತರನ್ನು ರೇಷ್ಮೆ ಶಾಲು ಹೊದಿಸಿ, ಪೇಟ ತೊಡಿಸಿ ಫಲ ಪುಷ್ಪ ಸ್ಮರಣಿಕೆಗಳನ್ನಿತ್ತು ಗೌರವಿಸಿ ಸನ್ಮಾನಿಸಲಾಯ್ತು.
ಸಂಚಾಲಕ ಎಂ ಶಾಂತರಾಮ ಕುಡ್ವರು ಅಭಿನಂದನಾ ನುಡಿಗಳನ್ನಾಡುತ್ತಾ ದಾನಿ ಗೀತಾ ವಿಜಯ ಕಾಮತರ ಕೊಡುಗೆಯನ್ನು ಸ್ಮರಿಸಿ, ಸತ್ಕಾರ್ಯ ಮಾಡುವವರನ್ನು ಗೌರವಿಸಬೇಕೆಂದು ಶಾಸ್ತ್ರದಲ್ಲಿಯೇ ಪ್ರಮಾಣ ವಾಕ್ಯವಿದೆ.
ಅವರ ಸೇವಾ ಸಮರ್ಪಣಾ ಭಾವನೆ ಇತರರಿಗೂ ಪ್ರೇರಣೆಯಾಗಬೇಕೆನ್ನುವ ಇಂಗಿತವನ್ನು ಆಡಳಿತ ಮಂಡಳಿ ಸಹಿತ ಎಲ್ಲರೂ ಅಪೇಕ್ಷಿಸಿದ್ದರಿಂದ ಅವರನ್ನು ಗೌರವಿಸಿ ಅವರಿಗೆ ಕ್ರತಜ್ಞರಾಗಿದ್ದೇವೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೂಡುಬಿದಿರೆಯ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಿ. ಉಮೇಶ್ ಪೈ, ಹಿರಿಯ ಸಹಕಾರೀ ಧುರಿಣ, ಪಡುಮಾರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ದಯಾನಂದ ಪೈ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಂದ್ರಹಾಸ ಆಚಾರ್ ರವರು ಗೀತಾ ವಿಜಯ ಕಾಮತರ ಕೊಡುಗೆಯನ್ನು ಅಭಿನಂದಿಸಿ ಮಾತನಾಡಿದರು.
ಶಾಲಾ ನೂತನ ಕೊಠಡಿಯ ನಾಮಫಲಕವನ್ನು ಗೀತಾ ವಿಜಯಾ ಕಾಮತ್ ರವರು ಅನಾವರಣಗೊಳಿಸಿದರು.
ಪ್ರಾರಂಭದಲ್ಲಿ ಮಕ್ಕಳು ಪ್ರಾರ್ಥನೆ ಹಾಡಿದರು. ನಿತ್ಯ ಪಂಚಾOಗ ಶ್ರವಣ ಮಾಡಿದರು.ವಿದ್ಯಾಸಂಸ್ಥೆಯ ಅಧ್ಯಕ್ಷ ರಾಜೇಶ್ ಎಂ ಬಂಗೇರರವರು ಸ್ವಾಗತಿಸಿದರು.ಶಿಕ್ಷಕಿಯರಾದ ಹರ್ಷಿತಾ ಕಾರ್ಯಕ್ರಮ ನಿರ್ವಹಿಸಿದರರು.ಶ್ರೀಮತಿ ಶಶಿಕಲಾ ವಂದಿಸಿದರು. ಮುಖ್ಯೋಪಾಧ್ಯಾಯಿನಿ ವತ್ಸಲಾ ರಾಜೇಶ್, ಟ್ರಸ್ಟೀ ಗಳಾದ ಮಂಜುನಾಥ ಶೆಟ್ಟಿ, ಎಸ್ ಎನ್ ಬೋರ್ಕರ್,ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

