ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಾವಂಜೆ ಗ್ರಾಮದ ಗೋಳಿಕಟ್ಟೆ ಅಲ್-ಫಲಾಹ್ ಜುಮ್ಮಾ ಮಸೀದಿಯ ನೂತನ ಕಟ್ಟಡದ ಉದ್ಘಾಟನೆ, ಸಾರ್ವಜನಿಕ ಮಸೀದಿ ಸಂದರ್ಶನ ಮತ್ತು ಭವ್ಯ ಸೌಹಾರ್ದ ಸಂಗಮ ಕಾರ್ಯಕ್ರಮವು ದಿನಾಂಕ 04 ನವೆಂಬರ್ 2026 ಬುಧವಾರ ದಂದು ವಿಜೃಂಭಣೆಯಿಂದ ನಡೆಯಲಿದೆ.
ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಸಮಾಜ ಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮೂವರು ದಿಗ್ಗಜರಿಗೆ “ನಾಗರಿಕ ಸನ್ಮಾನ” ನೀಡಿ ಗೌರವಿಸಲಾಗುತ್ತಿದೆ.
ಈ ಬಾರಿಯ ನಾಗರಿಕ ಸನ್ಮಾನ ಪುರಸ್ಕೃತರು
* ಫ್ರ್ಯಾಂಕಿ ಡಿಸೋಜ ಕೊಳಲಗಿರಿ *ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರು, ಸೌಹಾರ್ದತೆ ಮತ್ತು ತುಳುನಾಡಿನ ಹೋರಾಟದ ಮುಂಚೂಣಿ ನಾಯಕರು.
* ಪದ್ಮಶ್ರೀ ಹರೇಕಳ ಹಾಜಬ್ಬ – ಅಕ್ಷರ ಸಂತ, ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದ ಮಾನವತಾವಾದಿ.
* ರವಿ ಕಟಪಾಡಿ – ಮಾನವೀಯತೆಯ ದೀಪ, ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡುವ ನಿಜವಾದ ಹೀರೋ.
ಈ ಮೂವರು ಸಾಧಕರಿಗೆ ಸನ್ಮಾನ ನಡೆಯುತ್ತಿರುವುದು ಈ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿದೆ. ತುಳುನಾಡಿನಲ್ಲಿ ಜಾತಿ, ಧರ್ಮ ಮೀರಿ ಮಾನವೀಯತೆ ಮೆರೆಯಬೇಕು ಎಂಬ ಸಂದೇಶವನ್ನು ಸಾರುವ ಉದ್ದೇಶದಿಂದ ಈ ಸನ್ಮಾನವನ್ನು ಆಯೋಜಿಸಲಾಗಿದೆ ಎಂದು ಅಲ್-ಫಲಾಹ್ ಮಸೀದಿ ಸಮಿತಿಯವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆಯೋಜಕರು ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಶ್ರೀ ಫ್ರ್ಯಾಂಕಿ ಡಿಸೋಜ ಕೊಳಲಗಿರಿ *ಅವರ ನಿವಾಸಕ್ಕೆ ಭೇಟಿ ನೀಡಿ ಆಮಂತ್ರಣ ಪತ್ರಿಕೆ ನೀಡಿ, ಸನ್ಮಾನ ಕಾರ್ಯಕ್ರಮದ ಬಗ್ಗೆ ಆತ್ಮೀಯವಾಗಿ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಉಭಯ ಸಮುದಾಯಗಳ ನಡುವಿನ ಸೌಹಾರ್ದತೆ, ಭ್ರಾತೃತ್ವದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆಯೋಜಕರು, “ತುಳುನಾಡು ಸರ್ವ ಧರ್ಮ, ಸರ್ವ ಜನಾಂಗಗಳ ಸಾಮರಸ್ಯದ ನಾಡು. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಅಣ್ಣ ತಮ್ಮಂದಿರಂತೆ ಬಾಳುತ್ತಾ ಬಂದಿದ್ದೇವೆ. ಮಸೀದಿ ಉದ್ಘಾಟನೆಯು ಕೇವಲ ಒಂದು ಸಮುದಾಯದ ಕಾರ್ಯಕ್ರಮವಲ್ಲ, ಇದು ನಮ್ಮೆಲ್ಲರ ಸೌಹಾರ್ದತೆ, ಸಹೋದರತೆ ಮತ್ತು ಮಾನವೀಯತೆಯನ್ನು ಎತ್ತಿ ಹಿಡಿಯುವ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರಂತಹ ಜಾತ್ಯಾತೀತ ಚಿಂತನೆಯ ನಾಯಕರ ಉಪಸ್ಥಿತಿ ನಮಗೆ ಅತ್ಯಂತ ಸಂತೋಷ ತಂದಿದೆ” ಎಂದು ಹೇಳಿದರು.
ಆಮಂತ್ರಣ ಸ್ವೀಕರಿಸಿ ಮಾತನಾಡಿದ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರು, “ಗೋಳಿಕಟ್ಟೆಯಲ್ಲಿ ನಿರ್ಮಾಣವಾಗಿರುವ ನೂತನ ಮಸೀದಿಯು ಈ ಭಾಗದ ಶಾಂತಿ, ಪ್ರಗತಿಯ ಸಂಕೇತವಾಗಲಿ. ಧರ್ಮಕ್ಕಿಂತ ದೊಡ್ಡದು ಮನುಷ್ಯತ್ವ. ತುಳುನಾಡಿನ ಮಣ್ಣಿನಲ್ಲಿ ಸೌಹಾರ್ದತೆಯ ಬೀಜ ಬಿತ್ತುವ ಇಂತಹ ಕಾರ್ಯಕ್ರಮಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿಸುತ್ತೇನೆ” ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಗೌರವ ಸನ್ಮಾನದ ಅಂಗವಾಗಿ ಅಡ್ವೋಕೇಟ್ ಮೊಹಮ್ಮದ್ ತಾಹೀರ್, ಮೊಹಮ್ಮದ್ ಅಲಿ ಗೋಳಿಕಟ್ಟೆ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಲಾಗುವುದು ಎಂದು ಆಯೋಜಕರು ತಿಳಿಸಿದರು.

