ಐಸಿಎಫ್‌ಎಐ ನಲ್ಲಿ ಕಾನೂನು ಸೇವೆಗಳ ಕ್ಲಿನಿಕ್ ಉದ್ಘಾಟನೆ

0
7

ಕಾನೂನು ವಿದ್ಯಾರ್ಥಿಗಳು ಸಮಾಜದ ಸ್ವಾಸ್ತ್ಯ ಕಾಪಾಡಲು ಮುಂದಾಗಬೇಕು: ಶ್ರೀಶೈಲ್ ಭೀಮಶೇನ್ ಬಗಾಡಿ

ಬೆಂಗಳೂರು: ಕಾನೂನು ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ಸಮಾಜದ ಸ್ವಾಸ್ತ್ಯ ಕಾಪಾಡುವ ಕೆಲಸದಲ್ಲಿ ನಿರತರಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಶೈಲ್ ಭೀಮಶೇನ್ ಬಗಾಡಿ ಹೇಳಿದ್ದಾರೆ.

ನಗರದ ಐಸಿಎಫ್‌ಎಐ ಕಾನೂನು ಶಾಲೆ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಐಸಿಎಫ್‌ಎಐ ಕಾನೂನು ಶಾಲೆಯ ಲೀಗಲ್ ಏಡ್ ಕ್ಲಿನಿಕ್‌ನಲ್ಲಿ ಕಾನೂನು ಸೇವೆಗಳ ಕ್ಲಿನಿಕ್ ಅನ್ನು ಉದ್ಘಾಟಿಸಿ, ಪ್ರಸಕ್ತ ಸಾಲಿನ ಬಿ.ಬಿ.ಎ., ಎಲ್.ಎಲ್.ಬಿ. ವಿದ್ಯಾರ್ಥಿಗಳ ‘ದೀಕ್ಷಾರಂಭ’ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಾನೂನು ನೆರವಿನ ಮಹತ್ವದ ಬಗ್ಗೆ ತಿಳಿದುಕೊಳ್ಳಬೇಕು. ಪ್ರತಿಯೊಬ್ಬರಿಗೂ ಸಮಾನ ನ್ಯಾಯ ದೊರೆಯುವಂತಹ ವ್ಯವಸ್ಥೆ ರೂಪಿಸಲು ಶ್ರಮಿಸಬೇಕು. ನ್ಯಾಯದಾನ ಅತ್ಯಂತ ಮಹತ್ದ ಜವಾಬ್ದಾರಿಯಾಗಿದೆ ಎಂದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿಗಳು ಈಗಿನಿಂದಲೇ ಸಾಮಾನ್ಯ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ಸಮಾಜದ ಜೊತೆ ಒಡನಾಟವಿದ್ದರೆ ವ್ಯಾಜ್ಯಗಳನ್ನು ಬಹುಬೇಗ ಇತ್ಯರ್ಥಪಡಿಸುವ ಚಾಕಚಕ್ಯತೆ ಬರುತ್ತದೆ ಎಂದರು. ಕಾನೂನು ಸೇವೆಗಳ ಕ್ಲಿನಿಕ್ ಉದ್ಘಾಟನೆಯೊಂದಿಗೆ ಕಾನೂನು ಅರಿವು, ಉಚಿತ ಕಾನೂನು ನೆರವು ಹಾಗೂ ಸಮಾಜಸೇವಾ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ದೊರೆಯಿತು. ವಿದ್ಯಾರ್ಥಿ ಸಂಚಾಲಕರಾದ ಎಸ್.ವಿ. ವರ್ಷಾ ನೇತೃತ್ವದ ತಂಡದ ಸಂಯೋಜಕರಾಗಿ ಕಾರ್ಯನಿರ್ವಹಿಸಿತು.

ಐಎಫ್‌ಎಚ್‌ಇ ಕುಲಪತಿ ಪ್ರೊ. ಮುದ್ದು ವಿನಯ್, ಐಸಿಎಫ್‌ಎಐ ಕಾನೂನು ಶಾಲೆ ಹಾಗೂ ಬೆಂಗಳೂರು ಕ್ಯಾಂಪಸ್‌ನ ವಿಭಾಗದ ಮುಖ್ಯಸ್ಥರಾದ ಪ್ರೊ. ಡಾ. ವಿನಯ್ ಜೋಶಿ,, ಐಎಫ್‌ಎಚ್‌ಇ ನ ಡಾ. ರಾಜಶ್ರೀ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು