ಗ್ರಾಮೀಣ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಜ್ಞಾನ ಮತ್ತು ಆತ್ಮವಿಶ್ವಾಸ ಬೆಳೆಸಲು ಶಿಬಿರ ಸಹಕಾರಿ: ಡಾ. ಎಚ್.ಎಸ್. ಬಲ್ಲಾಳ್
ಮೂಡುಬಿದಿರೆ : ಶ್ರೀ ಮಹಾವೀರ ಕಾಲೇಜು, ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ), ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಪ್ರೌಢಶಾಲೆ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಎರಡನೇ ವರ್ಷದ ಕೃತಕ ಬುದ್ಧಿಮತ್ತೆ (ಎಐ) ಮತ್ತು ಕೋಡಿಂಗ್ ಬೂಟ್ ಶಿಬಿರ ಹಾಗೂ ಬಿಸಿಎ ಸಲಹಾ ಮಂಡಳಿಯ ಉದ್ಘಾಟನಾ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ಪ್ರೊ-ಚಾನ್ಸಲರ್ ಹಾಗೂ ಅಕಾಡೆಮಿ ಆಫ್ ಜನರಲ್ ಎಜುಕೇಶನ್ನ ಅಧ್ಯಕ್ಷರಾದ ಡಾ. ಎಚ್.ಎಸ್. ಬಲ್ಲಾಳ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಎಐ ಮತ್ತು ಕೋಡಿಂಗ್ ಜ್ಞಾನವು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದೆ. ಇಂತಹ ಶಿಬಿರಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನದ ಕಲಿಕೆಯ ಆಸಕ್ತಿ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಶ್ರೀ ಮಹಾವೀರ ಕಾಲೇಜು ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ಕಾರ್ಯದಲ್ಲಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನೀಡುತ್ತಿರುವ ಸಹಕಾರ ಶ್ಲಾಘನೀಯವಾಗಿದೆ ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಸಂಪತ್ ಸಾಮ್ರಾಜ್ಯ ಅವರು ಮಾತನಾಡಿ, ಎಐ ಮತ್ತು ಕೋಡಿಂಗ್ ಶಿಬಿರವು ವಿದ್ಯಾರ್ಥಿಗಳಿಗೆ ಔದ್ಯೋಗಿಕ ಕೌಶಲಗಳನ್ನು ಬೆಳೆಸಿಕೊಳ್ಳಲು, ಕೃತಕ ಬುದ್ಧಿಮತ್ತೆಯ ಹೊಸ ಸಾಧ್ಯತೆಗಳನ್ನು ಅರಿಯಲು ಹಾಗೂ ಭವಿಷ್ಯದ ಉದ್ಯೋಗಾವಕಾಶಗಳನ್ನು ಗುರುತಿಸಿ ವೃತ್ತಿಜೀವನದ ಕುರಿತು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ನೆರವಾಗಲಿದೆ ಎಂದು ಹೇಳಿದರು.
ಶಿಬಿರದ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ ಅವರು, ವಿದ್ಯಾರ್ಥಿಗಳು ಕೇವಲ ಕಷ್ಟಪಟ್ಟು ಕಲಿಯುವುದಕ್ಕಿಂತ ಆಸಕ್ತಿಯಿಂದ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ಕಲಿಕೆಯ ಬಗ್ಗೆ ಕುತೂಹಲ ಮತ್ತು ನಿರಂತರ ಪ್ರಯತ್ನವಿದ್ದರೆ ಹೊಸ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು ಎಂದು ಕರೆ ನೀಡಿದರು.
ಕಾಲೇಜಿನ ಹಳೆ ವಿದ್ಯಾರ್ಥಿ ಸಂಜಯ್ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಹಾವೀರ ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ, ಶೈಕ್ಷಣಿಕ ಫಲಿತಾಂಶ ಹಾಗೂ ಉದ್ಯೋಗ ನೇಮಕಾತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಎಂಐಟಿ ಮತ್ತು ಮಾಹೆ ಸಂಸ್ಥೆಗಳು ನೀಡುತ್ತಿರುವ ಬೆಂಬಲ ಅಮೂಲ್ಯವಾಗಿದೆ ಎಂದು ತಿಳಿಸಿದರು.
ಸಿಂಗಲ್ಸ್ಟೋರ್ ಸಂಸ್ಥೆಯ ಪ್ರಿನ್ಸಿಪಲ್ ಎಂಜಿನಿಯರ್ ಹಾಗೂ ಬಿಸಿಎ ಸಲಹಾ ಮಂಡಳಿಯ ಸದಸ್ಯರಾದ ಕಾಲೇಜಿನ ಹಳೆ ವಿದ್ಯಾರ್ಥಿ ವಾದಿರಾಜ್ ಭಟ್ ಅವರು ಮಾತನಾಡಿ, ಪ್ರಸ್ತುತ ಯುಗದಲ್ಲಿ ಕೃತಕ ಬುದ್ಧಿಮತ್ತೆಯ ಜ್ಞಾನ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳನ್ನು ಕಲಿತು ತಮ್ಮ ಕೌಶಲಗಳನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ತಮ್ಮ ತಾಂತ್ರಿಕ ಪರಿಣತಿ ಮತ್ತು ಮಾರ್ಗದರ್ಶನದ ಮೂಲಕ ಬಿಸಿಎ ವಿಭಾಗದ ಅಭಿವೃದ್ಧಿಗೆ ಸಹಕರಿಸುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಹೆಯ ಸಲಹೆಗಾರರು ಹಾಗೂ ಎಜಿಇ ಕಾರ್ಯದರ್ಶಿ ಡಾ. ನಾರಾಯಣ ಸಭಾಹಿತ್, ಎಜಿಇ ಆಡಳಿತಾಧಿಕಾರಿ ಡಾ. ಕೆ. ಶ್ರೀಧರ ರಂಗನಾಥ ಪೈ, ಎಂಐಟಿ ನಿರ್ದೇಶಕಿ ಡಾ. ಚಂದ್ರಕಲಾ, ಡೀನ್ ಡಾ. ರಾಧಿಕಾ ಪೈ, ಸಹಾಯಕ ಪ್ರಾಧ್ಯಾಪಕರಾದ ಡಾ. ಚಿತ್ರಾ ಕೆ. ಮತ್ತು ಸುಚರಿತ ಶೆಟ್ಟಿ, ಎಸ್ಎಂಸಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೆಫ್ಟಿನೆಂಟ್ ವಿಜಯಲಕ್ಷ್ಮಿ ಹಾಗೂ ಎಐ ಮತ್ತು ಕೋಡಿಂಗ್ ಕ್ಲಬ್ನ ವಿದ್ಯಾರ್ಥಿ ಪ್ರತಿನಿಧಿ ನಟರಾಜ್ ಹೆಬ್ಬಾರ್ ಉಪಸ್ಥಿತರಿದ್ದರು.
ಪದವಿ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ರಾಧಾಕೃಷ್ಣ ಅವರು ಸ್ವಾಗತಿಸಿ ಮಾತನಾಡಿ, ಕಳೆದ ವರ್ಷ ಆಯೋಜಿಸಿದ್ದ ಶಿಬಿರ ಯಶಸ್ವಿಯಾಗಿತ್ತು. ಈ ವರ್ಷ ಶಿಬಿರಕ್ಕೆ ಇನ್ನಷ್ಟು ಉತ್ತಮ ಸ್ಪಂದನೆ ದೊರೆತಿರುವುದು ಸಂತಸದ ಸಂಗತಿ ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಎಐ ಮತ್ತು ಕೋಡಿಂಗ್ ಕ್ಲಬ್ನ ಸಂಯೋಜಕಿ ಹಾಗೂ ಬಿಸಿಎ ವಿಭಾಗದ ಮುಖ್ಯಸ್ಥೆ ಕೀರ್ತಳ ಅವರು ವಂದಿಸಿದರು. ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ, ಕೋಡಿಂಗ್ ಮತ್ತು ಆಧುನಿಕ ತಂತ್ರಜ್ಞಾನಗಳ ಕುರಿತು ಪ್ರಾಯೋಗಿಕ ಅರಿವು ಮೂಡಿಸುವ ಈ ಶಿಬಿರವು ಅವರ ಶೈಕ್ಷಣಿಕ ಬೆಳವಣಿಗೆ ಹಾಗೂ ಭವಿಷ್ಯದ ವೃತ್ತಿಜೀವನಕ್ಕೆ ಪೂರಕವಾಗುವ ನಿರೀಕ್ಷೆಯಿದೆ.

