ತುಳುವ ಕ್ಲಬ್‌ನ ವೇಣೂರು ಘಟಕದ ಉದ್ಘಾಟನೆ

0
32

ಕಾಶಿಪಟ್ಣ : ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್‌ನ ನೇತೃತ್ವದಲ್ಲಿ ತುಳುವ ಕ್ಲಬ್‌ನ ವೇಣೂರು ಘಟಕದ ಉದ್ಘಾಟನೆಯು ನವೆಂಬರ್ 1ರಂದು ಭಾನುವಾರ ಕಾಶಿಪಟ್ಣದ ಬಿಲ್ಲವ ಸಂಘದ ಸಭಾಭವನದಲ್ಲಿ ನಡೆಯಿತು.

ಬೆಳ್ತಂಗಡಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಮಿತ್ತೊಟ್ಟು ಗುತ್ತಿನ ಪಿ. ಕೆ. ರಾಜು ಪೂಜಾರಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಪ್ರಾಸ್ತಾವಿಕವಾಗಿ ಮಾತನಾಡಿದ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕರಾದ ಮಹೇಶ್ ಮುಲ್ಕಿ ಅವರು ತುಳು ಸಂಘ-ಸಂಸ್ಥೆಗಳ ಅವಶ್ಯಕತೆ, ಸಾಮಾಜಿಕ ಜವಾಬ್ದಾರಿ ಹಾಗೂ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ ಮತ್ತು ತುಳುವ ಕ್ಲಬ್‌ನ ಉದ್ದೇಶಗಳ ಕುರಿತು ವಿವರಿಸಿದರು. ನಂತರ ತುಳುವ ಕ್ಲಬ್ ವೇಣೂರು ಘಟಕದ ಪದಾಧಿಕಾರಿಗಳ ಪದಗ್ರಹಣವು ಬ್ಯಾಡ್ಜ್ ಹಾಗೂ ತುಳು ಶಾಲು ಧರಿಸುವ ಮೂಲಕ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಳ್ತಂಗಡಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಮಿತ್ತೊಟ್ಟು ಗುತ್ತಿನ ಪಿ. ಕೆ. ರಾಜು ಪೂಜಾರಿ ಅವರು, ಯುವಕರು ಅಮೂಲ್ಯ ಸಂಪತ್ತು. ಅವರ ಶಕ್ತಿಯನ್ನು ವ್ಯರ್ಥ ಮಾಡದೆ ಸಂಸ್ಕೃತಿಯ ಉಳಿವಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವುದು ನಿಜಕ್ಕೂ ಶ್ಲಾಘನೀಯ. ಯುವಜನರ ಮುಂದಿನ ಪೀಳಿಗೆಗೆ ನಮ್ಮ ಪರಂಪರೆಯನ್ನು ಪರಿಚಯಿಸುವ ಜವಾಬ್ದಾರಿ ಸದಾ ನಮ್ಮ ಮೇಲಿದೆ. ತುಳು ಸಂಸ್ಕೃತಿಯ ಜೊತೆ ಸಂಸ್ಕಾರವು ಅಗತ್ಯ ಎಂದು ನುಡಿದರು. ಯುವಕರ ಕೈಯಿಂದ ಅನೇಕ ಲೋಕಕಲ್ಯಾಣದ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.

ಪೆರಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸತೀಶ್ ಕೆ. ಕಾಶಿಪಟ್ಣ ಅವರು ಮಾತನಾಡಿ, ಊರಿನ ಯುವಕರು ಒಗ್ಗೂಡಿ ನಮ್ಮ ಸಂಸ್ಕೃತಿಯ ಉಳಿವಿಗಾಗಿ ತುಳು ಸಂಘಟನೆಯನ್ನು ಕಟ್ಟಿಕೊಂಡಿರುವುದು ಶ್ಲಾಘನೀಯ. ಇವರು ತುಳು ಭಾಷೆ ಭಾರತದ ಸಂವಿಧಾನದ 8ನೇ ಪರಿಚ್ಛೇಧ ಭಾಷೆಯಾದರೆ ತುಳು ಭಾಷೆಗೆ ಸರ್ಕಾರದಿಂದ ಸಿಗುವ ಮಾನ್ಯತೆಗಳು ಹಾಗೂ ಅದರ ಪ್ರಯೋಜನಗಳು, ತುಳು ಸಂಸ್ಥೆಗಳಿಂದ ತುಳು ಉಳಿವಿನ ಬಗ್ಗೆ ನಡೆಯಬೇಕಾದ ಕೆಲಸಗಳ ಬಗ್ಗೆ ಮಾತನಾಡಿದರು. ನೂತನ ಘಟಕಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ ಎನ್‌ಸಿಸಿ ಕೆಡೆಟ್, ಬೆಳ್ತಂಗಡಿ ತಾಲೂಕಿನ ಮೂಡುಕೋಡಿ ಗ್ರಾಮದ ಆಲಡ್ಕ ನಿವಾಸಿ ಹಾಗೂ ಉದ್ಯಮಿ ಶ್ರೀ ನಾರಾಯಣ ಪೂಜಾರಿ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ನಂದಿತಾ ಅವರ ಪುತ್ರಿ ಕುಮಾರಿ ನಿಶ್ಮಾ ಅವರನ್ನು ಸನ್ಮಾನಿಸಲಾಯಿತು.

ಕಾಶಿಪಟ್ಣದ ಗರೋಡಿ ಫ್ರೆಂಡ್ಸ್‌ನ ಅಧ್ಯಕ್ಷರಾದ ಮನೋಜ್ ಕೋಟ್ಯಾನ್ ಅವರು ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಸಂಘಟನೆಗಳ ಅವಶ್ಯಕತೆಯನ್ನು ವಿವರಿಸಿ, ನೂತನ ಘಟಕದ ಕಾರ್ಯ ಚಟುವಟಿಕೆಗಳಿಗೆ ಶುಭ ಹಾರೈಸಿದರು ಹಾಗೂ ತುಳುನಾಡಿನ ಶ್ರೀಮಂತ ಕಲೆಗಳು, ಕರಕುಶಲ ಸಂಬಂಧಿ ಜ್ಞಾನ ಯುವ ಜನರಲ್ಲಿ ಅರಿವು ಮೂಡಬೇಕು, ತುಳು ನಾಡಿನ ಭವ್ಯ ಸಂಸ್ಕೃತಿಗೆ ಅಡಿಪಾಯವಾಗಿರುವ ಕೌಶಲ್ಯ ಕಲೆಗೆ ಒತ್ತು ನೀಡಬೇಕೆಂದು ನುಡಿದರು.

ಬಳಿಕ ಮಾತನಾಡಿದ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್‌ನ ಅಧ್ಯಕ್ಷರಾದ ನಿಶ್ಚಿತ್ ಜಿ. ರಾಮಕುಂಜ ಅವರು, ತುಳು ಭಾಷೆಗೆ ಅಧಿಕೃತ ಭಾಷೆಯ ಮಾನ್ಯತೆ ಘೋಷಣೆಯಾಗುವುದಷ್ಟೇ ಭಾಷೆಯ ಉಳಿವಿಗೆ ಸಾಕಾಗುವುದಿಲ್ಲ. ಅದರ ಉಳಿವಿಗಾಗಿ ನಾವೆಲ್ಲರೂ ಕೈಜೋಡಿಸಬೇಕು. ಸರ್ಕಾರ ಒದಗಿಸಿರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ನಮ್ಮ ಭಾಷೆಯ ಬೆಳವಣಿಗೆ ಹಾಗೂ ಸಂರಕ್ಷಣೆಗೆ ಶ್ರಮಿಸಬೇಕು. ಈ ನಿಟ್ಟಿನಲ್ಲಿ ತುಳುವ ಕ್ಲಬ್ ವೇಣೂರು ಘಟಕ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿ ನೂತನ ಘಟಕಕ್ಕೆ ಶುಭ ಹಾರೈಸಿದರು.

ತುಳುವ ಕ್ಲಬ್ ವೇಣೂರು ಘಟಕದ ನೂತನ ಪದಾಧಿಕಾರಿಗಳು:

ಅಧ್ಯಕ್ಷರು: ತೇಜಸ್ ಸಾಲ್ಯಾನ್ ಕೇಳ

ಉಪಾಧ್ಯಕ್ಷರು: ಪ್ರಣಾಮ್ ಪಜಿಲಾಡಿ

ಕಾರ್ಯದರ್ಶಿ: ನಿಖಿಲ್ ಸಿ. ಆಗಮೆ

ಸಹ ಕಾರ್ಯದರ್ಶಿ: ಪ್ರಜ್ವಲ್ ಸಾಲ್ಯಾನ್ ಮರಮ್ಮ ತಾವು

ಖಜಾಂಚಿ: ನಿತೀಶ್ ಆದೇಲ್

ಈ ಸಂದರ್ಭದಲ್ಲಿ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್‌ನ ಕಾರ್ಯದರ್ಶಿ ಸುಶಾನ್ ಕೋಟ್ಯಾನ್, ಪುಣ್ಣಮೆ ಪಬ್ಲಿಕೇಶನ್ಸ್‌ನ ನಿರ್ದೇಶಕರಾದ ಪೃಥ್ವಿ ತುಳುವೆ ಹಾಗೂ ತುಳುವ ಕ್ಲಬ್ ವೇಣೂರು ಘಟಕದ ಪದಾಧಿಕಾರಿಗಳಾದ ಅಶ್ವಥ್ ಕೋಟ್ಯಾನ್ ಕೊಡಂಗೆ, ಕಾರ್ತಿಕ್ ಸಾಲ್ಯಾನ್, ಹರಿಪ್ರಸಾದ್ ಕೋಟ್ಯಾನ್ ಮರಮ್ಮ ತಾವು, ಯತೀಶ್ ಶೆಟ್ಟಿಗಾರ್ ಪಣೆರಾಜೆ, ಸೃಜನ್ ಕಂಜಾಡಿ, ಪ್ರಜ್ಞಾ ಪಜಿಲಾಡಿ, ಗರೋಡಿ ಫ್ರೆಂಡ್ಸ್ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಊರಿನ ಗಣ್ಯರು ಹಾಗೂ ಯುವಜನರು ಉಪಸ್ಥಿತರಿದ್ದರು.

ನಿಖಿಲ್ ಸಿ. ಆಗಮೆ ಪ್ರಾರ್ಥಿಸಿದರು. ತೇಜಸ್ ಸಾಲ್ಯಾನ್ ಕೇಳ ಸ್ವಾಗತಿಸಿದರು. ಪ್ರಣಾಮ್ ಪಜಿಲಾಡಿ ವಂದಿಸಿದರು. ಪ್ರಜ್ಞಾ ಪಜಿಲಾಡಿ ಕಾರ್ಯಕ್ರಮ ನಿರೂಪಿಸಿದರು.