ವಿಹಾನ್ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ : ಹೆಜಮಾಡಿಯಲ್ಲಿ ಬೃಹತ್ ರಕ್ತದಾನ, ಉಚಿತ ನೇತ್ರ ತಪಾಸಣೆ ಶಿಬಿರ

0
42

ಹೆಜಮಾಡಿ : ಸಮಾಜಮುಖಿ ಸೇವೆ, ಮಾನವೀಯತೆ ಹಾಗೂ ಜನಕಲ್ಯಾಣದ ಉದ್ದೇಶದೊಂದಿಗೆ ಆರಂಭವಾಗುತ್ತಿರುವ ವಿಹಾನ್ ಚಾರಿಟೇಬಲ್ ಟ್ರಸ್ಟ್ (ರಿ.), ಹೆಜಮಾಡಿ ಇದರ ಉದ್ಘಾಟನಾ ಸಮಾರಂಭದ ಅಂಗವಾಗಿ ಅಕ್ಟೋಬರ್ 22ರಂದು ಬೃಹತ್ ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣೆ ಹಾಗೂ ಉಚಿತ ಪೊರೆ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ.

ಹೆಜಮಾಡಿಯ ಬಿಲ್ಲವರ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಕಾರ್ಯಕ್ರಮ ನಡೆಯಲಿದೆ. ಕಸ್ತೂರ್ಬಾ ಆಸ್ಪತ್ರೆ ರಕ್ತನಿಧಿ ಕೇಂದ್ರ, ಮಣಿಪಾಲ, ಪ್ರಸಾದ್ ನೇತ್ರಾಲಯ, ಉಡುಪಿ ಹಾಗೂ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ (ರಿ.), ಉಡುಪಿ ಇವರ ಸಹಯೋಗದಲ್ಲಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ.

ವಿಹಾನ್ ಚಾರಿಟೇಬಲ್ ಟ್ರಸ್ಟ್‌ನ ಉದ್ಘಾಟನೆಯನ್ನು ಮಾಜಿ ಸಚಿವರು ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ನೆರವೇರಿಸಲಿದ್ದಾರೆ. ಸಾಂದೀಪನಿ ಸಾಧನಾಶ್ರಮ, ಕೇಮಾರಿನ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕಾಂಜರಕಟ್ಟೆ ನೂರುಲ್ ಹುದಾ ಮಸೀದಿಯ ಖತೀಬರಾದ ಬಹುಮಾನ್ಯ ಅಶ್ರಫ್ ಫೈಝಿ ಹಾಗೂ ಮುಲ್ಕಿ ಕಾರ್ನಾಡ್ ಇಮ್ಯಾಕ್ಯುಲೇಟ್ ಕನ್ಸೆಪ್ಷನ್ ಚರ್ಚ್‌ನ ರೆ. ಫಾ. ಆಂಟನಿ ಎಂ. ಶೇರಾ ಉಪಸ್ಥಿತರಿರಲಿದ್ದಾರೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಹಾನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ದೀಕ್ಷಾ ಕೆ. ಅವರು ವಹಿಸಲಿದ್ದಾರೆ.

ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್ ದಾಸ್, ಕೃಷ್ಣ ಸುಧಾಮ ಫೌಂಡೇಶನ್‌ನ ಸುನಿಲ್ ಆಳ್ವ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ದಯಾನಂದ ಹೆಜಮಾಡಿ, ಜೈ ಕರ್ನಾಟಕ ಯುವ ಸಂಸ್ಥೆಯ ಅಧ್ಯಕ್ಷ ಪ್ರಬೋಧ ಚಂದ್ರ ಹೆಜಮಾಡಿ, ಸಮಾಜ ಸೇವಕ ಅಬ್ದುಲ್ ಅಜೀಜ್ ಹೆಜಮಾಡಿ, ಬಿಲ್ಲವರ ಸಂಘದ ಉಪಾಧ್ಯಕ್ಷ ಸುಧೀರ್ ಕರ್ಕೇರ, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿಯ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಆಡಳಿತ ಮಂಡಳಿಯ ಜೊತೆ ಕಾರ್ಯದರ್ಶಿ ರವಿ ಕೋಟ್ಯಾನ್, ಕಾಪು ತಾಲೂಕು ಭೂನ್ಯಾಯ ಮಂಡಳಿಯ ಸದಸ್ಯ ರಮೀಜ್ ಹುಸೇನ್, ಹಿರಿಯ ಮೊಗವೀರ ಮುಖಂಡ ಹರಿಶ್ಚಂದ್ರ ಮೆಂಡನ್, ಶಿಕ್ಷಕಿ ಪೂರ್ಣ ಪ್ರಜ್ನಾ ಆಂಗ್ಲಮಾಧ್ಯಮ ಶಾಲೆ ಅದಮಾರ್ ಯಶೋಧ ಪಡುಬಿದ್ರಿ ಹಾಗೂ ಹೆಜಮಾಡಿ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯೆ ನಿರ್ಮಲ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

“ನಿಮ್ಮ ಒಂದು ಹನಿ ರಕ್ತ ಮತ್ತೊಬ್ಬರ ಬದುಕಿನ ಆಶಾಕಿರಣ” ಎಂಬ ಸಂದೇಶದೊಂದಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವಂತೆ ಹಾಗೂ ಉಚಿತ ನೇತ್ರ ತಪಾಸಣೆ ಮತ್ತು ಪೊರೆ ಶಸ್ತ್ರಚಿಕಿತ್ಸಾ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಟ್ರಸ್ಟ್‌ನ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.