
ಪುತ್ತೂರು: ಅಕ್ಷಯ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಪದವಿ ಕಾಲೇಜಿನ ಆಂಗ್ಲ ಭಾಷಾ ವಿಭಾಗ ಮತ್ತು ಐಕ್ಯೂಎಸಿ ಸಹಭಾಗಿತ್ವದಲ್ಲಿ ವಾಲ್ ಬೋರ್ಡ್ ಮ್ಯಾಗಜಿನ್ ಉದ್ಘಾಟನೆ ಹಾಗೂ ‘ಪ್ರೊಫೆಷನಲ್ ಕಮ್ಯುನಿಕೇಷನ್’ ವಿಷಯದ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟನೆ ನೆರವೇರಿಸಿದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಅಕ್ಷಯ್ ಮಾತನಾಡಿ, ವಿದ್ಯಾರ್ಥಿಗಳ ಮೊದಲ ಪ್ರಯತ್ನ ಯಶಸ್ಸು ಕಂಡಿರುವುದು ಸಂತಸದ ವಿಚಾರ. ಇದು ನಿರಂತರವಾಗಿ ಹರಿಯುವ ನೀರಿನಂತೆ ಮುಂದುವರಿದು ಎಲ್ಲ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉತ್ತಮ ಮುನ್ನುಡಿಯಾಗಲಿ ಎಂದು ಹಾರೈಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಿವೇಕಾನಂದ ಕಾಲೇಜು ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ವಿಭಾಗದ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥ ಹಾಗೂ ಸಹಾಯಕ ಪ್ರಾಧ್ಯಾಪಕ ಬಾಲಕೃಷ್ಣ ಹೆಚ್. ಅವರು ವಾಲ್ ಬೋರ್ಡ್ ಮ್ಯಾಗಜಿನ್ ಉದ್ಘಾಟಿಸಿದರು. ವಿದ್ಯಾರ್ಥಿಗಳು ಈ ವೇದಿಕೆಯನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಇದರಿಂದ ದೊರೆಯುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ಸದಾ ಕಲಿಕೆಯ ತುಡಿತವನ್ನು ಬೆಳೆಸಿಕೊಳ್ಳುವಂತೆ ಹಾರೈಸಿದರು.
ಬಳಿಕ ಪ್ರೊಫೆಷನಲ್ ಕಮ್ಯುನಿಕೇಷನ್ ವಿಷಯದ ಕುರಿತು ಕಾರ್ಯಾಗಾರ ನಡೆಸಿ, ಪರಿಣಾಮಕಾರಿ ಸಂವಹನದ ಮೂಲಕ ವೃತ್ತಿಪರ ಉದ್ಯೋಗ ಕ್ಷೇತ್ರದಲ್ಲಿ ತಮ್ಮನ್ನು ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ವಿವಿಧ ಚಟುವಟಿಕೆಗಳ ಮೂಲಕ ವಿವರಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ. ಅರ್ಪಿತ್ ಟಿ.ಎ. ಮಾತನಾಡಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಸಂವಹನ ಕೌಶಲ್ಯ ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ಕಾರ್ಯಾಗಾರಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಇದಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ಕಾಲೇಜು ನೀಡಲು ಸದಾ ಸಿದ್ಧವಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆಂಗ್ಲ ಭಾಷಾ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಜಾಹೀರಾತು ಹಾಗೂ ರೀಲ್ಸ್ ತಯಾರಿಕೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜಾಹೀರಾತು ಸ್ಪರ್ಧೆಯಲ್ಲಿ ಫ್ಯಾಷನ್ ಡಿಸೈನ್ ವಿಭಾಗ ವಿಜೇತರಾಗಿ ಹಾಗೂ ಬಿಕಾಂ ವಿಭಾಗ ರನ್ನರ್ ಅಪ್ ಆಗಿ ಹೊರಹೊಮ್ಮಿತು.
ರೀಲ್ಸ್ ತಯಾರಿಕೆ ಸ್ಪರ್ಧೆಯಲ್ಲಿ ತೃತೀಯ ಬಿಸಿಎ ವಿದ್ಯಾರ್ಥಿನಿಯರಾದ ಅಫೀಝ ಮತ್ತು ಪಾವನ ಪ್ರಥಮ, ದ್ವಿತೀಯ ಬಿಎ ವಿದ್ಯಾರ್ಥಿನಿಯರಾದ ಶ್ರೇಯ ಮತ್ತು ವೀಕ್ಷಾ ದ್ವಿತೀಯ ಹಾಗೂ ದ್ವಿತೀಯ ಬಿಕಾಂ ವಿದ್ಯಾರ್ಥಿನಿಯರಾದ ಪುಣ್ಯ ಮತ್ತು ಶಹನಾ ತೃತೀಯ ಸ್ಥಾನ ಗಳಿಸಿದರು.
ಐಕ್ಯೂಎಸಿ ಸಂಯೋಜಕಿ ಹಾಗೂ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ರಶ್ಮಿ ಕೆ. ಪ್ರಸ್ತಾವನೆಗೈದರು. ಆಂಗ್ಲ ಭಾಷಾ ಉಪನ್ಯಾಸಕಿ ಪ್ರತೀಕ್ಷಾ ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು. ದ್ವಿತೀಯ ಬಿಕಾಂ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ದ್ವಿತೀಯ ಬಿಎ ವಿದ್ಯಾರ್ಥಿನಿ ಶ್ರೇಯ ಸ್ವಾಗತಿಸಿ, ತೃತೀಯ ಬಿಕಾಂ ವಿದ್ಯಾರ್ಥಿನಿ ಆಯುಷ್ಯತುಲ್ ವಫಾ ವಂದಿಸಿದರು. ತೃತೀಯ ಎಫ್.ಡಿ. ವಿದ್ಯಾರ್ಥಿನಿ ರಜೀನ ಬಾನು ಕಾರ್ಯಕ್ರಮ ನಿರೂಪಿಸಿದರು.
