ಮಕ್ಕಳಿಗೆ ಬಾಲ್ಯದಿಂದಲೇ ಧಾರ್ಮಿಕ ಸಂಸ್ಕಾರ ನೀಡಬೇಕು: ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ

0
15

ವೇಣೂರು: ಮಕ್ಕಳಿಗೆ 15ನೇ ವಯಸ್ಸಿನಲ್ಲಿಯೇ ವ್ರತೋಪದೇಶ ನೀಡಿ, ಜೈನಧರ್ಮದ ಮರ್ಮವನ್ನು ತಿಳಿಸಿ, ಅರಿತು ಆಚರಿಸುವಂತೆ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಕಾರ್ಕಳ ದಾನಶಾಲಾ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಇತ್ತೀಚೆಗೆ ನಿಧನರಾದ ಮಂಗಳೂರು ಎಸ್.ಡಿ.ಎಂ. ಕಾನೂನು ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ಪ್ರೊ. ಎನ್. ಜಿನ್ನಪ್ಪ ಕಡಂಬ ಅವರ ಸ್ಮರಣಾರ್ಥ ಶಾಸ್ತ್ರದಾನಕ್ಕಾಗಿ ಪ್ರಕಟಿಸಲಾದ ‘ಜಿನಸ್ತುತಿ’ ಕೃತಿಯನ್ನು ಬುಧವಾರ ವೇಣೂರು ಕಲ್ಲುಬಸದಿಯಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಂಗಲ ಪ್ರವಚನ ನೀಡಿದರು.

ಜೈನರ ಪವಿತ್ರ ತೀರ್ಥಕ್ಷೇತ್ರವಾದ ಶಿಖರ್ಜಿಗೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ ದರ್ಶನ ಪಡೆಯಬೇಕು ಎಂದು ಸಲಹೆ ನೀಡಿದ ಸ್ವಾಮೀಜಿ, ಜೈನಧರ್ಮದ ಆಚಾರ-ವಿಚಾರಗಳು, ವ್ರತ-ನಿಯಮಗಳು ಹಾಗೂ ಜಪ-ತಪಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮನೆಯೇ ಮಂದಿರವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನುಡಿನಮನ ಸಲ್ಲಿಸಿದ ಮೂಡುಬಿದಿರೆ ಜೈನ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಮಾತನಾಡಿ, ‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬಂತೆ ಪ್ರೊ. ಎನ್. ಜಿನ್ನಪ್ಪ ಕಡಂಬ ಅವರು ಎಲೆಮರೆಯ ಕಾಯಿಯಂತೆ ಸಮಾಜಕ್ಕೆ ಸೇವೆ ಸಲ್ಲಿಸಿದವರು. ತಮ್ಮ ಬಳಿಗೆ ಬಂದವರಿಗೆ ಕಾನೂನಿನ ಮೂಲಕ ಅಭಯ ನೀಡುತ್ತಿದ್ದರು. ಶಿಕ್ಷಣತಜ್ಞರಾಗಿ ಹಾಗೂ ದಕ್ಷ ಆಡಳಿತಗಾರರಾಗಿ ಅವರು ಸಲ್ಲಿಸಿದ ಸೇವೆ ಶ್ಲಾಘನೀಯ ಎಂದರು.

ಜೈನ ಸಂಪ್ರದಾಯದಂತೆ ‘ಜಿನಸ್ತುತಿ’ ಕೃತಿಯನ್ನು ಎಲ್ಲರಿಗೂ ಶಾಸ್ತ್ರದಾನದ ರೂಪದಲ್ಲಿ ವಿತರಿಸಲಾಯಿತು.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿಯ ಸನ್ನಿಧಿಯಲ್ಲಿ 504 ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಪದ್ಮಾವತಿ ಅಮ್ಮನವರಿಗೆ ಪುಷ್ಪಪೂಜೆ ಹಾಗೂ ದೇವರ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿಗುತ್ತು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಕೆ. ಜಯವರ್ಮರಾಜ ಬಳ್ಳಾಲ್, ಕೆ. ರಾಜವರ್ಮ ಬಳ್ಳಾಲ್, ಮಂಗಳೂರು ಎಸ್.ಡಿ.ಎಂ. ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ. ರಾಜೇಂದ್ರ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ, ವಕೀಲ ಕೆ.ಬಿ. ಹರಿಶ್ಚಂದ್ರ ಬಳ್ಳಾಲ್, ನೋಟರಿ ಶಶಿಕಿರಣ್ ಜೈನ್ ಬೆಳ್ತಂಗಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.