ತುಳುವ ಮಹಾಸಭೆಯ ಶತಮಾನೋತ್ಸವದ ಅಂಗವಾಗಿ ನಾಲ್ಕನೇ ಕಾರ್ಯಕ್ರಮ
ಕಠ್ಮಂಡು, ನೇಪಾಳ : ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗುತ್ತಿರುವ ಕಾರ್ಯಕ್ರಮಗಳ ಸರಣಿಯಲ್ಲಿ ನಾಲ್ಕನೇ ಕಾರ್ಯಕ್ರಮವಾದ ಇಂಡೋ–ನೇಪಾಳ ತುಳುವ ಮಹಾಸಭೆ 2026ರ ಅಕ್ಟೋಬರ್ 28ರಂದು ನೇಪಾಳದ ಕಠ್ಮಂಡುವಿನಲ್ಲಿ ನಡೆಯಲಿದೆ.
ಪಶುಪತಿನಾಥ ದೇವಸ್ಥಾನದ ಮುಖ್ಯ ಅರ್ಚಕರಾದ ಹಾಗೂ ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ನೇಪಾಳ ಘಟಕದ ಅಧ್ಯಕ್ಷರಾದ ರಾವಲ್ ಗಣೇಶ್ ಭಟ್ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮಂಗಳೂರು ಮತ್ತು ಮುಂಬೈ ಸೇರಿದಂತೆ ವಿವಿಧ ಪ್ರದೇಶಗಳಿಂದ ಸುಮಾರು 45 ಮಂದಿ ಭಾಗವಹಿಸಲಿದ್ದಾರೆ. ತುಳುವರ್ಲ್ಡ್ ಫೌಂಡೇಶನ್‌ನ ಉಪಾಧ್ಯಕ್ಷರಾದ ಜಯಪ್ರಕಾಶ್ ಪೂಜಾರಿ ಅವರು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.
ಬಸ್ರೂರು ತುಳುವೇಶ್ವರಿ ಸಾನಿಧ್ಯ ಮತ್ತು ಶ್ರೀಚಕ್ರದ ಕುರಿತು ಚಿಂತನ–ಮಂಥನ
ಬಸ್ರೂರು ತುಳುವೇಶ್ವರಿ ಸಾನಿಧ್ಯದಿಂದ ಶ್ರೀಚಕ್ರವನ್ನು ನೇಪಾಳಕ್ಕೆ ಕೊಂಡೊಯ್ಯಲಾಗಿತ್ತು ಎಂಬ ವಿಷಯವು ಅಷ್ಟಮಂಗಲ ಪ್ರಶ್ನೆಯ ಚಿಂತನೆಯ ಸಂದರ್ಭದಲ್ಲಿ ಪ್ರಸ್ತಾಪಗೊಂಡಿರುವ ಹಿನ್ನೆಲೆಯಲ್ಲಿ, ಈ ಕುರಿತು ವಿಶೇಷ ಚಿಂತನ–ಮಂಥನ ನಡೆಯಲಿದೆ. ಈ ವಿಷಯಕ್ಕೆ ಸಂಬಂಧಿಸಿದ ಲಭ್ಯವಿರುವ ಐತಿಹಾಸಿಕ ಮಾಹಿತಿ, ಸ್ಥಳೀಯ ನಂಬಿಕೆಗಳು, ಮೌಖಿಕ ಪರಂಪರೆಗಳು ಹಾಗೂ ತುಳುನಾಡು ಮತ್ತು ನೇಪಾಳದ ನಡುವಿನ ಧಾರ್ಮಿಕ–ಸಾಂಸ್ಕೃತಿಕ ಸಂಬಂಧಗಳ ಕುರಿತು ಚರ್ಚೆ ನಡೆಸಲಾಗುವುದು.
ತುಳುನಾಡಿನ ಪ್ರಾಚೀನ ಧಾರ್ಮಿಕ ಪರಂಪರೆಗಳನ್ನು ಅಧ್ಯಯನ ಮಾಡುವುದು, ಅವುಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸುವುದು ಮತ್ತು ಸಾಂಸ್ಕೃತಿಕ ಸಂಬಂಧಗಳ ಕುರಿತು ಮುಂದಿನ ಸಂಶೋಧನೆಗೆ ಅವಕಾಶ ಕಲ್ಪಿಸುವುದು ಈ ಚಿಂತನ–ಮಂಥನದ ಉದ್ದೇಶವಾಗಿದೆ.
ತುಳುವ ಮಹಾಸಭೆಯ ಶತಮಾನೋತ್ಸವದ ಅಂಗವಾಗಿ ನಡೆಯುತ್ತಿರುವ ಈ ಕಾರ್ಯಕ್ರಮವು ತುಳುನಾಡು ಮತ್ತು ನೇಪಾಳದ ನಡುವಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಬಂಧಗಳನ್ನು ಗುರುತಿಸುವ ಪ್ರಯತ್ನಕ್ಕೆ ಮಹತ್ವದ ವೇದಿಕೆಯಾಗಲಿದೆ.
ಸ್ಥಳ: Hotel Tara Suites Pvt. Ltd., Tusal Marg, Gaurighat, Kathmandu, Nepal. ಪಶುಪತಿನಾಥ ದೇವಸ್ಥಾನದ ಸಮೀಪದಲ್ಲಿ ಕಾರ್ಯಕ್ರಮ ನಡೆಯಲಿದೆ.

