ಆನ್​ಲೈನ್​ ಯುಗದಲ್ಲಿ ಗ್ರಾಹಕರ ಹಕ್ಕುಗಳ ಮಾಹಿತಿ ಅತೀ ಅಗತ್ಯ

0
31

ಉಡುಪಿ : ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ನ್ಯಾಯಯುತ ವ್ಯಾಪಾರ ಪದ್ಧತಿಗಳನ್ನು ಉತ್ತೇಜಿಸಲು 1986 ರಲ್ಲಿ ಗ್ರಾಹಕರ ಸಂರಕ್ಷಣಾ ಕಾಯ್ದೆ ಜಾರಿಗೆ ತರಲಾಯಿತು. ಆನ್​ಲೈನ್​ ಯುಗದಲ್ಲಿ ವಿದ್ಯಾರ್ಥಿಗಳೂ ಗ್ರಾಹಕರಾಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಗ್ರಾಹಕರ ಹಕ್ಕುಗಳ ಬಗ್ಗೆ ಸರಿಯಾದ ಮಾಹಿತಿ ಹೊಂದುವುದು ಅಗತ್ಯ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸುನೀಲ ಟಿ. ಮಾಸರೆಡ್ಡಿ ಹೇಳಿದರು .

ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಮತ್ತು ಬಳಕೆದಾರರ ವೇದಿಕೆ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ದುಡ್ಡು ಕೊಟ್ಟು ಖರೀದಿಸುವ ವಸ್ತು ಅಥವಾ ಸೇವೆಗಳು ದೋಷಪೂರಿತವಾಗಿದ್ದರೆ ಅಥವಾ ಆನ್​ಲೈನ್​ ಖರೀದಿಯಲ್ಲಿ ಮೋಸ ವಂಚನೆ ನಡೆದಾಗ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಬಹುದು. ಗ್ರಾಹಕರನ್ನು ಮರಳು ಮಾಡುವ ಜಾಹೀರಾತುಗಳ ಬಗ್ಗೆ ಮಾಹಿತಿ ಇರಬೇಕು. ನಮ್ಮ ಹಕ್ಕುಗಳ ಬಗ್ಗೆ ಅರಿವಿದ್ದಾಗ ಅನ್ಯಾಯಯುತ ವ್ಯಾಪಾರ ಪದ್ಧತಿಗಳಿಗೆ ಕಡಿವಾಣ ಹಾಕಬಹುದು ಎಂದರು.
ಹಿರಿಯ ಸಿವಿಲ್​ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್​ ಬಿ.ವೈ ಮಾತನಾಡಿ, ಹಿಂದಿನ ಕಾಲದಲ್ಲಿ ಭೌತಿಕವಾಗಿ ವಸ್ತು ಮತ್ತು ಸೇವೆಗಳನ್ನು ಪಡೆಯುತ್ತಿದ್ದೆವು. ಇದೀಗ ಡಿಜಿಟಲ್​ ಯುಗದಲ್ಲಿ ಎಲ್ಲವನ್ನೂ ಆನ್​ಲೈನ್​ ಮೂಲಕ ಪಡೆಯುತ್ತಿದ್ದೇವೆ. ಖರೀದಿಯಲ್ಲಿ ನಡೆಯುವ ಯಾವುದೇ ರೀತಿಯ ಮೋಸಗಳಿಗೆ ಗ್ರಾಹಕರ ವೇದಿಕೆಯಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯ. ಆರೋಗ್ಯ, ಶಿಕ್ಷಣ ಅಥವಾ ಇನ್ನಾವುದೇ ರೀತಿಯ ಸೇವೆಯಲ್ಲಿ ನಡೆಯುವ ಅನ್ಯಾಯಗಳಿಗೂ ಗ್ರಾಹಕರ ನ್ಯಾಯಾಲಯದಲ್ಲಿ ಪರಿಹಾರ ದೊರೆಯುತ್ತದೆ ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಸಂದೀಪ್​ ಕುಮಾರ್​, ಕಾನೂನು ಮಾಪನ ಇಲಾಖೆ ಸಹಾಯಕ ನಿಯಂತ್ರಕ ದೇವರಾಜ್​ ಟಿ.ಎನ್​. ಮತ್ತಿತರರು ಉಪಸ್ಥಿತರಿದ್ದರು. ಬಳಕೆದಾರರ ವೇದಿಕೆ ಸಂಚಾಲಕ ಯುಜಿ ಕಾಮತ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ರಶ್ಮಿ ಎಂ. ತೇಲಿ ಸ್ವಾಗತಿಸಿ, ಬಳಕೆದಾರರ ವೇದಿಕೆ ವಿಶ್ವಸ್ಥ ರಾಮ ಭಟ್​ ನಿರೂಪಿಸಿ, ಲಕ್ಷ್ಮೀ ಂ ಬಾಯಿ ವಂದಿಸಿದರು.

LEAVE A REPLY

Please enter your comment!
Please enter your name here