Wednesday, April 23, 2025
Homeಉಡುಪಿಹೊಸಂಗಡಿ ಗ್ರಾಮದ ಹೆಗ್ಗೋಡ್ಲಿನಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ

ಹೊಸಂಗಡಿ ಗ್ರಾಮದ ಹೆಗ್ಗೋಡ್ಲಿನಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ, ಹೆಗ್ಗೋಡ್ಲು ಅನಂತಕೃಷ್ಣ ಉಡುಪರ ಗದ್ದೆಯಲ್ಲಿ ಈ ಶಾಸನವು ದೊರೆತಿದೆ. ಈ ಶಾಸನವನ್ನು ದೇವರ ಕಲ್ಲೆಂದು ಯಾರೂ ಮುಟ್ಟುತ್ತಿರಲ್ಲಿಲ್ಲ. ಈ ಗದ್ದೆಯನ್ನು ಕಲ್ಲುಗದ್ದೆ ಎಂದೇ ಇಂದಿಗೂ ಕರೆಯಲಾಗುತ್ತಿದೆ.

25-30 ವರ್ಷಗಳ ಹಿಂದೆ ಪಂಡಿತರೊಬ್ಬರು ಈ ಕಲ್ಲಿನಲ್ಲಿ ಅಕ್ಷರಗಳಿವೆ, ಬಾರ್ಕೂರು ಅರಸರ ಶಾಸನವಾಗಿರಬಹುದೆಂದು ಹಾಗೂ ಉಳ್ಳೂರು ಗರಡಿಗೆ ಸಂಬಂಧಿಸಿರಬಹುದೆಂದು ಹೇಳಿದ್ದಾಗಿ ತಿಳಿದುಬಂದಿದೆ. ಇತ್ತೀಚೆಗೆ ಇದನ್ನು ಗಮನಿಸಿದ ಸಿದ್ದಾಪುರ CA ಬ್ಯಾಂಕ್ ವ್ಯವಸ್ಥಾಪಕರಾದ ಮಹೇಶ್ ರಾವ್ ಹೆಗ್ಗೋಡ್ಲು ಇವರು ತುಮಕೂರು ವಿ. ವಿ ಸಂಶೋಧನಾರ್ಥಿ ವೈಶಾಲಿ ಜಿ. ಆರ್ ರವರಿಗೆ ತಿಳಿಸಿದ್ದಾರೆ. ಇವರು ಸ್ಥಳಕ್ಕೆ ಭೇಟಿ ನೀಡಿ ಶಿಕ್ಷಕಿ ನಳಿನಿ ರಾವ್ ಹಾಗೂ ಶೇಖರ್ ಕುಲಾಲ್ ರೊಂದಿಗೆ ಶಾಸನವನ್ನು ಸ್ವಚ್ಛಗೊಳಿಸಿ ನೋಡಿದ್ದಾರೆ. ತುಮಕೂರು ವಿ. ವಿ ಸಂಶೋಧನಾರ್ಥಿ ಶಶಿಕುಮಾರ್ ನಾಯ್ಕ್ ರವರು ತಿಳಿಸಿದಂತೆ ಶಾಸನದ ಪ್ರತಿ ತೆಗೆದಿದ್ದಾರೆ.

ಕಣ ಶಿಲೆಯಲ್ಲಿರುವ ಈ ಶಾಸನವು, ಮಣ್ಣಿನ ಮೇಲ್ಭಾಗದಲ್ಲಿ ಸುಮಾರು ಎರಡು ಅಡಿ ಎತ್ತರ ಕಾಣಿಸುತ್ತಿದೆ, ಒಂದು ಕಾಲು ಅಡಿಯಷ್ಟು ಅಗಲವಿದೆ. ಗದ್ದೆಯಲ್ಲಿ ಬಹಳ ಕೆಸರಿರುವುದರಿಂದ ಹೂತು ಹೋಗಿರುವ ಈ ಶಾಸನವು ಮುಂಭಾಗಕ್ಕೆ ಬಾಗಿಕೊಂಡಿದೆ. 5 ಅಡಿಗಳಿಗಿಂತ ಹೆಚ್ಚು ಎತ್ತರವಾಗಿರಬಹುದೆಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ. ಶಾಸನದ ಮೇಲ್ಭಾಗದಲ್ಲಿ ಒಟ್ಟು 7 ಸಾಲುಗಳು ಕಾಣಿಸುತ್ತವೆ. ಅವುಗಳಲ್ಲಿ ಮೇಲಿನ ಸಾಲಿನ ಕೆಲವು ಅಕ್ಷರಗಳು ಸ್ವಲ್ಪ ಮಟ್ಟಿಗೆ ತೃಟಿತಗೊಂಡಿವೆ. ಶಾಸನದ ಕೆಳಭಾಗದ ಸಾಲುಗಳು ಸುಮಾರಾಗಿ ಕಾಣಿಸುತ್ತಿವೆ. ಈ ಶಾಸನದ ಮೇಲ್ಭಾಗದಲ್ಲಿ ಸೂರ್ಯ, ಚಂದ್ರ, ಬಲಭಾಗದಲ್ಲಿ ಕರುವಿಗೆ ಹಾಲುಣಿಸುತ್ತಿರುವ ಹಸು, ಎಡ ಭಾಗದಲ್ಲಿ, ದೀಪದ ಕಂಬ ಮತ್ತು ಈ ಶಾಸನವು ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿರುವುದು ಕಂಡು ಬಂದಿದೆ. ಈ ಶಾಸನವು ಪೂರ್ವ ದಿಕ್ಕಿಗೆ ಮುಖ ಮಾಡಿದೆ. ಶಾಸನ ಮುಖಮಾಡಿರುವ ದಿಕ್ಕಿನ ಸ್ಥಳದಿಂದ 3 ಕಿಲೋಮೀಟರ್ ಅಂತರದೊಳಗೆ ಹೊಳೆ ಶಂಕರನಾರಾಯಣ ದೇವಸ್ಥಾನವಿದೆ ಮತ್ತು ದಕ್ಷಿಣಕ್ಕೆ 1.5 ಕಿಲೋಮೀಟರ್ ನಲ್ಲಿ ಕೋಟೆ ಈಶ್ವರ ದೇವಸ್ಥಾನ, ಉತ್ತರದಲ್ಲಿ ಸುಮಾರು 500 ಮೀಟರ್ ಅಂತರದಲ್ಲಿ ಅಮ್ಮನವರ ದೇವಸ್ಥಾನ ಹಾಗೂ ಪಶ್ಚಿಮಕ್ಕೆ 4-5 ಕಿಲೋಮೀಟರ್ ದೂರದಲ್ಲಿ ಉಳ್ಳೂರು ಗರಡಿ ಹಾಗೂ ಬನಶಂಕರಿ ದೇವಸ್ಥಾನಗಳಿವೆ.

ಈ ಶಾಸನವು ವಿಜಯನಗರ ಕಾಲಘಟ್ಟದ 14 ರಿಂದ 15 ನೇ ಶತಮಾನದ ಲಿಪಿಯನ್ನು ಹೋಲುತ್ತಿದೆ. ಇದೊಂದು ಶೈವ ದೇವಾಲಯಕ್ಕೆ ಕೊಟ್ಟ ದಾನ ಶಾಸನವಾಗಿ ಕಾಣಿಸುತ್ತಿದೆಯೆಂದು ಪ್ರೊ. ಎಂ ಕೊಟ್ರೇಶ್, ಅಧ್ಯಕ್ಷರು, DOSR ಇತಿಹಾಸ ಮತ್ತು ಪುರಾತತ್ವ ವಿಭಾಗ, ತುಮಕೂರು ವಿ. ವಿ ಮತ್ತು ಅಖಿಲ ಭಾರತೀಯ ಇತಿಹಾಸ ಸಂಕಲನ ಸಮಿತಿ ರಾಷ್ಟ್ರಾಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಹಾಗೂ ಶಾಸನದ ಸಂರಕ್ಷಣೆಯ ಅಗತ್ಯತೆಯನ್ನು ಹಾಗೂ ಐತಿಹಾಸಿಕ ಹೊಳೆ ಶಂಕರನಾರಾಯಣ ದೇವರ ಸೇವೆಗಾಗಿ ಭೂಮಿ ದಾನ ಬಿಟ್ಟಿರುವ ಶಾಸನವು ಕೌಲೇದುರ್ಗದಲ್ಲಿರುವುದನ್ನು ತಿಳಿಸಿದ್ದಾರೆ.ಶಾಸನವನ್ನು ಮಣ್ಣಿನಿಂದ ಹೊರತೆಗೆದು ನೋಡಿದರಷ್ಟೇ ಈ ಶಾಸನದ ಐತಿಹಾಸಿಕ ಮಹತ್ವ ಬೆಳಕಿದೆ ಬರುತ್ತದೆ. ಈ ಶಾಸನ ಪ್ರಕಟವಾದಂತೆ ಕಂಡು ಬಂದಿಲ್ಲ.ಈ ವಿಚಾರವನ್ನು ASI ಗಮನಕ್ಕೆ ತರಲಾಗುವುದು ಎಂದಿದ್ದಾರೆ.

ಉಡುಪಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಕಂಡು ಬಂದಂತೆ, ಶಾಸನಗಳನ್ನು ನೋಡಿ ಅದರಲ್ಲಿನ ಮಾಹಿತಿ ತಿಳಿದು ಮಾಧ್ಯಮಗಳಿಗೆ ನೀಡಿ ತದನಂತರದಲ್ಲಿ ಆ ವಿಚಾರವನ್ನು ಅಲ್ಲಿಗೆ ಕೈಬಿಟ್ಟ ಕಾರಣಗಳಿಂದ ಕೆಲವು ಶಾಸನಗಳು ಇತಿಹಾಸದ ಪುಟಗಲ್ಲಿ ದಾಖಲಾಗದೇ ಉಳಿದಿವೆಯೆಂದು ಕಂಚಾರ್ತಿ ರಾಜೇಶ್ವರ ಉಪಾಧ್ಯಾಯರವರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಶಾಸನವಿರುವ ಸ್ಥಳದಲ್ಲಿ ಹೆಗ್ಗೋಡ್ಲು ಸುತ್ತಮುತ್ತಲ ಪರಿಸರದ, ಹಿರಿಯರಾದ ಜಯರಾಮ್ ಶೆಟ್ಟಿ, ಜನತಾ ಕಾಲೇಜು ಉಪನ್ಯಾಸಕ ಅಮರ್ ಶೆಟ್ಟಿ, ಡಿ ನಾಗೇಂದ್ರ ಯಡಿಯಾಳ ವಿದ್ಯಾರ್ಥಿ ಮನೋಜ್ನ ರಾವ್, ಪ್ರದೀಪ್ ಕುಮಾರ್ ಬಸರೂರು ಮುಂತಾದವರು ಆ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಿದ್ದಾಪುರದ ಡಾ. ಶ್ರೀಕಾಂತ್ ರಾವ್ ಕೂಡ ಶಾಸನಾಧ್ಯಯನಕ್ಕೆ ಪೂರ್ವದಲ್ಲಿ ಈ ಸ್ಥಳಕ್ಕೆ ತೇರಳಿದ್ದರೆಂದು ತಿಳಿದುಬಂದಿದೆ.

RELATED ARTICLES
- Advertisment -
Google search engine

Most Popular