ಜೆರೊಸಾ ಸ್ಕೂಲ್‌ನಿಂದ ರೋಷನಿ ನಿಲಯದವರೆಗೆ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ವೀಕ್ಷಣೆ

0
9

ಹೆಚ್ಚುವರಿ ಅನುದಾನ ಬಿಡುಗಡೆಗೆ ಐವನ್ ಡಿʼಸೋಜಾ ಒತ್ತಾಯ

ಮಂಗಳೂರು: ಮಹಾತ್ಮಾ ಗಾಂಧಿ ವಿಕಾಸ ಯೋಜನೆ–2ರ ಅಡಿಯಲ್ಲಿ ಜೆರೊಸಾ ಸ್ಕೂಲ್‌ನಿಂದ ರೋಷನಿ ನಿಲಯದವರೆಗೆ ನಡೆಯುತ್ತಿರುವ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಯನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿʼಸೋಜಾ ಅವರು ಸ್ಥಳೀಯರು, ಇಂಜಿನಿಯರ್‌ಗಳು ಹಾಗೂ ಕಾರ್ಪೊರೇಟರ್‌ಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಸ್ತುತ ಕಾಮಗಾರಿಯ ಸುಮಾರು 50ರಿಂದ 60ರಷ್ಟು ಕೆಲಸ ಪೂರ್ಣಗೊಂಡಿದ್ದು, ಬಾಕಿ ಇರುವ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಕುರಿತು ಐವನ್ ಡಿʼಸೋಜಾ ಅವರು ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಚರ್ಚೆ ನಡೆಸಿದರು. ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಎದುರಾಗುತ್ತಿರುವ ತೊಂದರೆಗಳು ಹಾಗೂ ಇನ್ನಷ್ಟು ಕೈಗೊಳ್ಳಬೇಕಿರುವ ಕಾಮಗಾರಿಗಳ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.

ರಸ್ತೆ ಕಾಮಗಾರಿಗೆ ಸಂಬಂಧಿಸಿದ ಕಾನೂನು ಹಾಗೂ ತಾಂತ್ರಿಕ ಅಂಶಗಳ ಕುರಿತು ಇಂಜಿನಿಯರ್ ಅಶೋಕ್ ಮೆಂಡೋನ್ಸಾ ಅವರೊಂದಿಗೆ ಚರ್ಚಿಸಿದ ಅವರು, ಕಾಮಗಾರಿಯ ಮುಂದಿನ ಹಂತಗಳನ್ನು ಗುಣಮಟ್ಟದೊಂದಿಗೆ ಹಾಗೂ ಸಮರ್ಪಕವಾಗಿ ಕೈಗೊಳ್ಳುವಂತೆ ಸೂಚಿಸಿದರು.

ರಸ್ತೆಯ ಇಕ್ಕೆಲಗಳಲ್ಲಿ ಕೇವಲ ಮಣ್ಣು ತುಂಬಿಸುವ ಬದಲು, ಅಗತ್ಯವಿರುವ ಸ್ಥಳಗಳಲ್ಲಿ ಹೆಚ್ಚುವರಿ ಕಾಂಕ್ರೀಟೀಕರಣ ಅಥವಾ ಇಂಟರ್‌ಲಾಕ್ ಅಳವಡಿಸುವಂತೆ ಐವನ್ ಡಿʼಸೋಜಾ ಸಲಹೆ ನೀಡಿದರು. ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಇದಲ್ಲದೆ, ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಐವನ್ ಡಿʼಸೋಜಾ ಅವರು ಒತ್ತಾಯಿಸಿದರು. ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದಂತೆ ಹಾಗೂ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬೂತ್ ಅಧ್ಯಕ್ಷ ಅನಿಲ್ ಜೆರಾಲ್ಡ್ ಲೋಬೋ, ಇಂಜಿನಿಯರ್ ಅಶೋಕ್ ಮೆಂಡೋನ್ಸಾ, ಜೆರೊಸಾ ಶಾಲೆಯ ವ್ಯವಸ್ಥಾಪಕರಾದ ಸಿಸ್ಟರ್ ಅರ್ಪಿತಾ, ಮಂಗಳೂರು ನಗರಪಾಲಿಕೆಯ ಇಂಜಿನಿಯರ್ ಶಿವಲಿಂಗಪ್ಪ, ಸಯೀದಾ, ಸ್ಥಳೀಯರಾದ ಸಿಸಿಲಿಯಾ ಮೊಂತೆರೋ, ಶೆಲಟ್ ನೊರಹಾನ್ಹ, ಹಬೀಬ್ ಹಾಗೂ ಗುತ್ತಿಗೆದಾರ ಇಕ್ಬಾಲ್ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.