ಮಂಗಳೂರು ವಿಶ್ವವಿದ್ಯಾನಿಲಯ ಪುರುಷರ ಮತ್ತು ಮಹಿಳೆಯರ ವಿಭಾಗದ ಬಿ. ಎಂ. ಸುಕುಮಾರ್ ಶೆಟ್ಟಿ ಹಾಗೂ ಶಿರ್ವ ಗ್ರೇಸಿ ಮಚಾದೋ ಟ್ರೋಫಿ, ಅಂತರಕಾಲೇಜು ಸಾಫ್ಟ್ ಬಾಲ್ ಪಂದ್ಯಾವಳಿಯು ವಿಶ್ವವಿದ್ಯಾನಿಲಯ ಕಾಲೇಜು ಬನ್ನಡ್ಕ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಇವರ ಜಂಟಿ ಆಯೋಜನೆಯಲ್ಲಿ ಮಹಾವೀರ ಕಾಲೇಜು ಮೂಡುಬಿದಿರೆ ಇಲ್ಲಿ ಜರುಗಿತು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೆ. ಅಭಯಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿ ಕ್ರೀಡಾಪಟುಗಳಿಗೆ ಹಿತವಚನ ಬೋಧಿಸಿದರು. ಗೌರವ ಅತಿಥಿಗಳಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ|| ಜೆರಾಲ್ಡ್ ಸಂತೋಷ್ ಡಿಸೋಜ, ಮೂಡುಬಿದಿರೆ ಸಹಕಾರ ಸಂಘದ ಅಧ್ಯಕ್ಷರಾದ ಎಂ. ಬಾಹುಬಲಿ ಪ್ರಸಾದ್, ಪಡುಮಾರ್ನಾಡು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ದಯಾನಂದ ಪೈ ಆಟಗಾರರಿಗೆ ಶುಭ ಹಾರೈಸಿದರು.
ಬನ್ನಡ್ಕ ವಿಶ್ವವಿದ್ಯಾನಿಲಯ ಕಾಲೇಜಿನ ಸಂಯೋಜಕರಾದ ಡಾ|| ಕೆ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ರತ್ನಾಕರ ಪುತ್ರಾಯ ಸ್ವಾಗತಿಸಿದರು, ಉಪನ್ಯಾಸಕರಾದ ಸಂತೋಷ್ ವಂದಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸಾಫ್ಟ್ ಬಾಲ್ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ನಾಲ್ವರು ಆಟಗಾರ್ತಿಯರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಶ್ರೀಯುತ ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು.
ವರದಿ ರಾಯಿ ರಾಜ ಕುಮಾರ
.

