ದರೆಗುಡ್ಡೆ : ಸುಮಾರು ಐದು ದಶಕಗಳ ಹಿಂದೆ, ಕಾಂಗ್ರೆಸ್ ಪಕ್ಷದ ಪ್ರಭಾವ ಪ್ರಬಲವಾಗಿದ್ದ ಕಾಲದಲ್ಲಿ ದರೆಗುಡ್ಡೆ ಹಾಗೂ ಮೂಡಬಿದ್ರಿ ಪರಿಸರದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರೇ ಇಲ್ಲದಂತಹ ಸಂದರ್ಭದಲ್ಲಿ, ಪಕ್ಷದ ಸಿದ್ಧಾಂತವನ್ನು ಜನರಿಗೆ ಪರಿಚಯಿಸುವ ಸಂಕಲ್ಪದೊಂದಿಗೆ ಒಬ್ಬಂಟಿಗನಾಗಿ ಮನೆ ಮನೆಗೆ ತೆರಳಿ ಸಂಘಟನಾ ಕಾರ್ಯ ನಡೆಸಿದ ಹಿರಿಯ ಬಿಜೆಪಿ ಕಾರ್ಯಕರ್ತ ಜಿನದತ್ತ ಹೆಗ್ಡೆ ಅವರು ನಿಧನರಾಗಿದ್ದಾರೆ.
ಅಂದು ಯಾವುದೇ ಅಧಿಕಾರ, ಸ್ಥಾನಮಾನ ಅಥವಾ ಪ್ರತಿಫಲದ ಅಪೇಕ್ಷೆಯಿಲ್ಲದೆ, ಭುಜದ ಮೇಲೆ ಒಂದು ಚೀಲವನ್ನು ಹಾಕಿಕೊಂಡು ಗ್ರಾಮೀಣ ಪ್ರದೇಶದ ಮನೆ ಮನೆಗೆ ತೆರಳಿ ಭಾರತೀಯ ಜನತಾ ಪಕ್ಷದ ವಿಚಾರಧಾರೆ ಹಾಗೂ ಸಿದ್ಧಾಂತವನ್ನು ಜನರಿಗೆ ಪರಿಚಯಿಸುವ ಮಹತ್ವದ ಕಾರ್ಯವನ್ನು ಜಿನದತ್ತ ಹೆಗ್ಡೆ ಅವರು ಮಾಡಿದ್ದರು.
ದರೆಗುಡ್ಡೆ ಭಾಗದಲ್ಲಿ ಬಿಜೆಪಿಯ ಸಂಘಟನೆಯ ಅಡಿಪಾಯ ಹಾಕುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇಂದು ಈ ಭಾಗದಲ್ಲಿ ಭಾರತೀಯ ಜನತಾ ಪಕ್ಷ ಬಲಿಷ್ಠವಾಗಿ ಬೆಳೆದು ನಿಂತಿರುವುದರ ಹಿಂದೆ, ಅಂದಿನ ದಿನಗಳಲ್ಲಿ ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಪಕ್ಷಕ್ಕಾಗಿ ದುಡಿದ ಜಿನದತ್ತ ಹೆಗ್ಡೆಯವರಂತಹ ಹಿರಿಯ ಕಾರ್ಯಕರ್ತರ ತ್ಯಾಗ, ಪರಿಶ್ರಮ ಮತ್ತು ನಿಷ್ಠೆ ಮಹತ್ವದ್ದಾಗಿದೆ.
“ಇಂದಿನ ಬಿಜೆಪಿಯ ಬೆಳವಣಿಗೆಯ ಕನಸನ್ನು ಅಂದೇ ಕಂಡು, ಆ ಕನಸನ್ನು ನನಸಾಗಿಸಲು ತಮ್ಮ ಜೀವನದ ಅಮೂಲ್ಯ ಸಮಯವನ್ನು ಪಕ್ಷಕ್ಕಾಗಿ ಸಮರ್ಪಿಸಿದ ನಿಷ್ಠಾವಂತ ಕಾರ್ಯಕರ್ತ” ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.
ದರೆಗುಡ್ಡೆಯ ಪ್ರಪ್ರಥಮ ಬಿಜೆಪಿ ಕಾರ್ಯಕರ್ತರಲ್ಲಿ ಪ್ರಮುಖರಾಗಿದ್ದ ಜಿನದತ್ತ ಹೆಗ್ಡೆ ಅವರ ಅಗಲಿಕೆ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯರಿಗೆ ತುಂಬಲಾರದ ನಷ್ಟವಾಗಿದೆ. ಸರಳತೆ, ನಿಷ್ಠೆ ಮತ್ತು ಪಕ್ಷದ ಮೇಲಿನ ಅಚಲ ಬದ್ಧತೆಯಿಂದ ಅವರು ಅನೇಕರಿಗೆ ಮಾದರಿಯಾಗಿದ್ದರು.
ಅವರ ನಿಧನಕ್ಕೆ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮನಾಥ್ ಎ ಕೋಟ್ಯಾನ್ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ಹಿಂದು ಜಾಗರಣ ವೇದಿಕೆ ಮುಖಂಡ ಸಮಿತ್ ರಾಜ್ ದರೆಗುಡ್ಡೆ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ದರೆಗುಡ್ಡೆ ಮತ್ತು ಮೂಡಬಿದ್ರಿ ಪರಿಸರದ ಗಣ್ಯರು ಸಂತಾಪ ಸೂಚಿಸಿದ್ದು, ಅಗಲಿದ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಹಾಗೂ ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಜಿನದತ್ತ ಹೆಗ್ಡೆಯವರ ಪಕ್ಷನಿಷ್ಠೆ ಮತ್ತು ಸೇವೆ ಸದಾ ಸ್ಮರಣೀಯ.

