ಸ್ಕೂಟರ್ ಕಳವು ಪ್ರಕರಣ : 40ಕ್ಕೂ ಹೆಚ್ಚು ಪ್ರಕರಣಗಳ ಆರೋಪಿಯ ಬಂಧನ

0
24

ಮಂಗಳೂರು : ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಕೂಟರ್ ಕಳವು ಮಾಡಿದ ಆರೋಪದ ಮೇಲೆ ಉಳ್ಳಾಲ ಮೂಲದ ಮಹಮ್ಮದ್ ಫೈಜಲ್ ಅಲಿಯಾಸ್ ತೋಟ ಫೈಜಲ್ (40) ಎಂಬಾತನನ್ನು ಉರ್ವ ಠಾಣೆ ಪೊಲೀಸರು ಆಗಸ್ಟ್ 18ರಂದು ಬಂಧಿಸಿದ್ದಾರೆ.

ಜುಲೈ 24ರಂದು ಕೋಡಿಕಲ್‌ನ ಮನೆಯೊಂದರ ಮುಂಭಾಗದಲ್ಲಿ ನಿಲ್ಲಿಸಿದ್ದ ಸ್ಕೂಟರ್‌ ಕಳವಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಉರ್ವ ಠಾಣೆ ಪೊಲೀಸರು ತನಿಖೆ ಆರಂಭಿಸಿ, ಕಳವು ನಡೆದ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.

ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಯ ಚಲನವಲನದ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು, ಆತನ ಗುರುತು ಪತ್ತೆಹಚ್ಚಿದ್ದಾರೆ. ಬಳಿಕ ಕಾರ್ಯಾಚರಣೆ ನಡೆಸಿ ಮಹಮ್ಮದ್ ಫೈಜಲ್‌ನನ್ನು ಬಂಧಿಸಿದ್ದು, ಆತನಿಂದ ಕಳವಾಗಿದ್ದ ಸ್ಕೂಟರ್‌ನ್ನೂ ವಶಪಡಿಸಿಕೊಂಡಿದ್ದಾರೆ.

ಕರ್ನಾಟಕ, ಕೇರಳದಲ್ಲಿ 40ಕ್ಕೂ ಹೆಚ್ಚು ಪ್ರಕರಣ

ಪೊಲೀಸರ ಪ್ರಕಾರ ಬಂಧಿತ ಮಹಮ್ಮದ್ ಫೈಜಲ್ ವಿರುದ್ಧ ಕರ್ನಾಟಕ ಹಾಗೂ ಕೇರಳದ ವಿವಿಧ ಪೊಲೀಸ್ ಠಾಣೆಗಳಲ್ಲಿ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಳವು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆತನ ಹೆಸರು ಕೇಳಿಬಂದಿದ್ದು, ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧನ ವಾರಂಟ್‌ಗಳೂ ಜಾರಿಯಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರಿನ ಬಂದರು, ಕೊಣಾಜೆ, ಉಳ್ಳಾಲ, ಮೂಡುಬಿದಿರೆ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯ ಹಿಂದಿನ ಅಪರಾಧ ಚಟುವಟಿಕೆಗಳು ಹಾಗೂ ಇತರ ಕಳವು ಪ್ರಕರಣಗಳಲ್ಲಿ ಆತನ ಪಾತ್ರದ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತನಿಂದ ಮತ್ತಷ್ಟು ಪ್ರಕರಣಗಳ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದ್ದು, ತನಿಖೆ ಮುಂದುವರಿದಿದೆ.