Saturday, June 14, 2025
HomeUncategorizedಕ್ರೀಡಾ ಪ್ರತಿಭೆಗಳಿಗೆ ಉದ್ಯೋಗ ಭದ್ರತೆ ಕಲ್ಪಿಸುವುದು ಅವಶ್ಯ: ಅಂತಾರಾಷ್ಟ್ರೀಯ ದೇಹದಾಡ್ಯ ಪಟು ರೇಮಂಡ್ ಡಿಸೋಜಾ ಅಭಿಪ್ರಾಯ

ಕ್ರೀಡಾ ಪ್ರತಿಭೆಗಳಿಗೆ ಉದ್ಯೋಗ ಭದ್ರತೆ ಕಲ್ಪಿಸುವುದು ಅವಶ್ಯ: ಅಂತಾರಾಷ್ಟ್ರೀಯ ದೇಹದಾಡ್ಯ ಪಟು ರೇಮಂಡ್ ಡಿಸೋಜಾ ಅಭಿಪ್ರಾಯ

ಮಂಗಳೂರು : ಛಲ, ಶಿಸ್ತು, ಕಠಿಣ ಪರಿಶ್ರಮ ಇದ್ದರೆ ಮಾತ್ರ ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಯುವ ಕ್ರೀಡಾ ಪ್ರತಿಭೆಗಳು ವೈಯಕ್ತಿಕ ಸಾಧನೆಯ ಜತೆಗೆ  ದೇಶಕ್ಕೆ ಕೀರ್ತಿ ತರುವ ಉನ್ನತ ಕನಸು ಕಾಣಬೇಕು ಎಂದು ಅಂತಾರಾಷ್ಟ್ರೀಯ ದೇಹದಾಡ್ಯ ಪಟು, ಮಿ. ವರ್ಲ್ಡ್ ರೇಮಂಡ್ ಡಿಸೋಜಾ ಹೇಳಿದರು.
ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಮಂಗಳವಾರ ಮಂಗಳೂರು ಪ್ರೆಸ್‌ಕ್ಲಬ್ ಗೌರವ ಅತಿಥಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘  ಇತ್ತೀಚಿನ ವರ್ಷಗಳಲ್ಲಿ ಕ್ರೀಡಾ ಪ್ರತಿಭೆಗಳಿಗೆ ಬ್ಯಾಂಕ್ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಇಲ್ಲದಾಗಿದೆ. ಉದ್ಯೋಗದಲ್ಲಿ ಕ್ರೀಡಾ ಕೋಟಾ ಕಡಿಮೆಯಾದ ಕಾರಣ ವಿದ್ಯಾರ್ಥಿಗಳು ಕ್ರೀಡೆಯಿಂದ ವಿಮುಖರಾಗುವ ವಾತಾವರಣ ನಿರ್ಮಾಣವಾಗಿದೆ.  ಕ್ರೀಡಾಪಟುಗಳಿಗೆ ಉದ್ಯೋಗ ಭದ್ರತೆ ಕಲ್ಪಿಸಲು ಸರ್ಕಾರ ಆದ್ಯತೆ ನೀಡಬೇಕು ’ಎಂದರು.
ಹದಿ ಹರೆಯದಲ್ಲೇ ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಛಲ ಮೂಡಿತು.  ಹಾಗಾಗಿ ಬಡತನ ಇದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರುವ ಸಾಧನೆ ಮಾಡಿದೆ. ಬಂಟ್ವಾಳದ ಮೊಡಂಕಾಪುವಿನಲ್ಲಿ ಪ್ರೌಢ ಶಿಕ್ಷಣ ಪಡೆದ ಬಳಿಕ ಬಡತನದ  ಕಾರಣ ವಿದ್ಯಾಭ್ಯಾಸ ಮುಂದುವರಿಸಲು ಆಗಲಿಲ್ಲ. ಓದಿನಲ್ಲಿ ಹೆಚ್ಚಿನ ಉದ್ಯೋಗ ಆಸಕ್ತಿಯೂ ಇರಲಿಲ್ಲ. ಉದ್ಯೋಗ ಅರಸಿ ಮಂಗಳೂರಿಗೆ ಬಂದವನು ಅಲೋಶಿಯಸ್ ಹಾಸ್ಟೆಲ್‌ನಲ್ಲಿ ಕೆಲಸಕ್ಕೆ ಸೇರಿದೆ. ಸುಮಾರು ನೂರು ವಿದ್ಯಾರ್ಥಿಗಳಿಗೆ 3 ಸಿಬ್ಬಂದಿ ಅಡುಗೆ ಮಾಡಬೇಕಿತ್ತು. ತುಂಬಾ ಕಷ್ಟದ ಕೆಲಸದ ಮಧ್ಯೆಯೂ ಸಾಯಂಕಾಲ ಜಿಮ್‌ಗೆ ಹೋಗಿ ಅಭ್ಯಾಸ ಮಾಡುತ್ತಿದ್ದೆ. ಈಗಿನಂತೆ ಟ್ರಾಕ್ ಸೂಟ್, ಶೂ, ಪೌಷ್ಟಿಕ ಆಹಾರ ಯಾವ ಸೌಲಭ್ಯವೂ ಇರಲಿಲ್ಲ.  ಮಣ್ಣಿನ ಅಖಾಡದಲ್ಲಿ ಅಭ್ಯಾಸ ಮಾಡಬೇಕಿತ್ತು.  ಜಿಮ್‌ನಲ್ಲಿ ತರಬೇತುದಾರ ರಾಮಕೃಷ್ಣ ಅವರು , ಬಳಿಕ ಗುರುಗಳಾದ ಗಣೇಶ್ ಪಾಂಡೇಶ್ವರ, ಎಂ.ಎಸ್.ಕುಮಾರ್ ಪ್ರೋತ್ಸಾಹ ನೀಡಿದರು. ಬಾಡಿ ಬಿಲ್ಡಿಂಗ್ ಬಗ್ಗೆ ಯಾವುದೇ ಜ್ಞಾನ ಇಲ್ಲದ ನನ್ನಂತ ಹಳ್ಳಿ ಹುಡುಗನನ್ನು ಸ್ಪರ್ಧೆಗೆ  ಅಣಿಗೊಳಿಸಿದರು ಎಂದು  ರೇಮಂಡ್ ಡಿಸೋಜಾ ಹಿಂದಿನ ದಿನಗಳನ್ನು ಸ್ಮರಿಸಿಕೊಂಡರು.
ಸುರತ್ಕಲ್‌ನಲ್ಲಿ ನಡೆದ ಮೊದಲ ಒಂದು ಸ್ಪರ್ಧೆಯಲ್ಲೇ ಪ್ರಥಮ ಬಹುಮಾನ ಗಳಿಸಿದೆ. ಮುಂದೆ ಪ್ರತೀ ಸ್ಪರ್ಧೆಯಲ್ಲೂ ಗೆಲುವು ಸಾಧಿಸಿದೆ. ಆತ್ಮ ವಿಶ್ವಾಸ ಮೂಡಿತು. ಅದೇ ವೇಳೆ ಕಾರ್ಪೋರೇಶನ್ ಬ್ಯಾಂಕ್‌ನಲ್ಲಿ ಕ್ರೀಡಾ ಕೋಟಾದಲ್ಲಿ ಉದ್ಯೋಗ ದೊರೆಯಿತು. ಬ್ಯಾಂಕ್ ನೀಡಿದ ಪ್ರೋತ್ಸಾಹದಿಂದ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದೆ. 23ನೇ ವಯಸ್ಸಿಗೆ ಭಾರತ್ ಕಿಶೋರ್, ಭಾರತ್ ಕುಮಾರ್, ಭಾರತ್ ಶ್ರೀ ಪ್ರಶಸ್ತಿಗಳನ್ನು ಗೆದ್ದಿದೆ. 1990ರಲ್ಲಿ ಜಪಾನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಮಿ.ವರ್ಲ್ಡ್ ಪ್ರಶಸ್ತಿ ಗೆದ್ದೆ. ಪ್ರಥಮ ಬಾರಿಗೆ ಭಾರತೀಯನೊಬ್ಬ ಈ ಪ್ರಶಸ್ತಿ ಗೆದ್ದ ಹೆಮ್ಮೆ ನನ್ನದು . ಹಿಂದೆ ಕ್ರೀಡೆಯಲ್ಲಿ ನಗದು ಬಹುಮಾನ ಇರಲಿಲ್ಲ. ದೇಶಕ್ಕೆ ಪದಕ ಗೆಲ್ಲುವುದೇ ನಮಗೆ ಖುಷಿಯ ವಿಷಯವಾಗಿತ್ತು ಎಂದು ಅವರು ಹೇಳಿದರು.
ಹಿರಿಯ ಪತ್ರಕರ್ತ ಕೇಶವ ಕುಂದರ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ  ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ , ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ಉಪಸ್ಥಿತರಿದ್ದರು.  ಪ್ರೆಸ್‌ಕ್ಲಬ್ ಪ್ರಧಾನ  ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಆರ್.ಸಿ.ಭಟ್  ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular